"ನನ್ನ ಮುಂಭಡ್ತಿ ಈ ಒಂದು ಪೇಪರ್ ಮೇಲೆ ನಿಂತಿದೆ, ಒಳ್ಳೆಯ ಮನಸ್ಸಿನಿಂದ ಪಾಸ್ ಮಾಡಿ!"
ಎಸೆಸೆಲ್ಸಿ ಉತ್ತರಪತ್ರಿಕೆಯಲ್ಲೇ ಮೌಲ್ಯಮಾಪಕರಿಗೆ ಮನವಿ ಬರೆದಿರುವ ಪರೀಕ್ಷಾರ್ಥಿ!

ವಿಜಯಪುರ, ಎ.29: ನನ್ನ ಮುಂಭಡ್ತಿ ಈ ಒಂದು ಪೇಪರ್ ಮೇಲೆ ನಿಂತಿದೆ, ಒಳ್ಳೆಯ ಮನಸ್ಸಿನಿಂದ ಪಾಸ್ ಮಾಡಿ ... ಹೀಗೆಂದು ಈ ಬಾರಿ ಎಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲೇ ಪರೀಕ್ಷಾರ್ಥಿಯೋರ್ವ ತನ್ನನ್ನು ಉತ್ತೀರ್ಣಗೊಳಿಸುವಂತೆ ಮೌಲ್ಯಮಾಪಕರನ್ನು ಮನವಿ ಮಾಡಿದ್ದಾನೆ.
ಎಸೆಸೆಲ್ಸಿ ಮೌಲ್ಯಮಾಪನ ವೇಳೆ ಮನವಿಯನ್ನು ಒಳಗೊಂಡ ಈ ಉತ್ತರ ಪತ್ರಿಕೆ ಸಿಕ್ಕಿರುವುದು ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ.
ಸಿದ್ದರಾಮೇಶ್ವರ ಪ್ರೌಢಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಎಂಬವರಿಗೆ ಮೌಲ್ಯಮಾಪನ ಮಾಡುತ್ತಿದ್ದ ವೇಳೆ ಈ ಉತ್ತರ ಪತ್ರಿಕೆ ಸಿಕ್ಕಿದೆ. ಪರೀಕ್ಷಾರ್ಥಿಯು ತನ್ನನ್ನು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲೇ ಮೌಲ್ಯಮಾಪಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾನೆ.
"ಮೌಲ್ಯಮಾಪನ ಮಾಡುತ್ತಿರುವ ನನ್ನ ಉಪಾಧ್ಯಾಯರೇ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ. ನಾನು ಗ್ರಾಪಂ ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಬಿಲ್ ಕಲೆಕ್ಟರ್ ಆಗಿ ಮುಂಭಡ್ತಿ ಸಿಗಲಿದೆ. ಅದು ಈ ಒಂದು ಪೇಪರ್ (ಇದರಲ್ಲಿ ಉತ್ತೀರ್ಣ) ಮೇಲೆ ನಿಂತಿದೆ. ನಿಮ್ಮ ಒಳ್ಳೆಯ ಮನಸ್ಸಿನಿಂದ ನನ್ನನ್ನು ಪಾಸ್ ಮಾಡಿ, ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ. ನಿಮ್ಮಿಂದ ನನಗೆ ಅನ್ನ ಸಿಕ್ಕಿದಂತಾಗುತ್ತದೆ" ಎಂದೆಲ್ಲ ಭಾವನಾತ್ಮಕವಾಗಿ ಉತ್ತರಪತ್ರಿಕೆಯಲ್ಲಿ ಮನವಿ ಮಾಡಿದ್ದಾನೆ.








