9 ಜಿಲ್ಲೆಗಳಲ್ಲಿ 9 ನೂತನ ಮೆಡಿಕಲ್ ಕಾಲೇಜು ಆರಂಭ: ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು, ಎ.29: ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ ಹೊಸತಾಗಿ 9 ವೈದ್ಯಕೀಯ ಕಾಲೇಜುಗಳು ಆರಂಭ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ನಗರದ ಬೆಂಗಳೂರು ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 65 ವೈದ್ಯಕೀಯ ಕಾಲೇಜುಗಳಿವೆ. 4 ಸರಕಾರಿ ವೈದ್ಯಕೀಯ ಕಾಲೇಜುಗಳು ಶೀಘ್ರದಲ್ಲಿ ಆರಂಭವಾಗಲಿವೆ. ಅದೇ ರೀತಿ, ಖಾಸಗಿಯಲ್ಲಿ ಮೂರು ಹೆಚ್ಚುವರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ ಎಂದರು.
ದೇಶದ ವೈದ್ಯ ವಿದ್ಯಾರ್ಥಿಗಳಲ್ಲಿ ಶೇಕಡಾ 30.5ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಿಂದಿನ ಏಳು ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾವಣೆ ಕಂಡಿದೆ. ಪ್ರತಿ ವರ್ಷ 65 ಸಾವಿರ ಎಂಬಿಬಿಎಸ್ ವೈದ್ಯರು ಮತ್ತು 30 ಸಾವಿರ ವೈದ್ಯರು ಸ್ನಾತಕೋತ್ತರ ಪದವಿ ಪಡೆದು ಸೇವೆಗೆ ಲಭ್ಯರಾಗುತ್ತಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಇಂದು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮಹಿಳಾ ಸಬಲೀಕರಣದ ಸಂಕೇತ. ಸಮಾಜದಲ್ಲಿ ಬದಲಾವಣೆಗಳು ಆಗುತ್ತಿವೆ. ಬಡವರ ಮಕ್ಕಳು ಕೂಡ ವೈದ್ಯರಾಗಬೇಕೆಂಬ ಕನಸು ಈಡೇರುತ್ತಿದೆ ಎಂದು ಹೇಳಿದರು.
ಬೆಂಗಳೂರು ಮೆಕಲ್ ಕಾಲೇಜು(ಬಿಎಂಸಿ) ದೇಶದ ಹೆಮ್ಮೆಯ ಕಾಲೇಜುಗಳುಗಳಲ್ಲಿ ಒಂದು. ಇಲ್ಲಿ ಪ್ರವೇಶ ಪಡೆಯುವ ಕನಸು ಹಲವು ವಿದ್ಯಾರ್ಥಿಗಳಿಗೆ ಇರುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಅನನ್ಯ ಸೇವೆ ಸಲ್ಲಿಸಿದ್ದಾರೆ. ಜೀವನದಲ್ಲಿ ಎದುರಾಗಬಹುದುದಾದ ಸಂಕಷ್ಟಗಳು ಕಲಿಕೆಯ ಹಂತದಲ್ಲೇ ಅನುಭವಕ್ಕೆ ಬಂದಿದೆ ಎಂದು ನುಡಿದರು.
ಭಾರತ ವೈದ್ಯಕೀಯ ವಿಜ್ಞಾನಕ್ಕೆ ಅದ್ಭುತ ಇತಿಹಾಸವಿದೆ. ಆಯುರ್ವೇದದಲ್ಲಿ ಚರಕ, ಶುಶ್ರೂತರ ಕೊಡುಗೆ ಅಮೂಲ್ಯವಾದದ್ದು. ಬಿಎಂಸಿ ಕೂಡ ಕೇವಲ ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿಲ್ಲ. ಬದಲಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಡೆಗೂ ಗಮನ ಹರಿಸಿದೆ ಎಂದು ಹೇಳಿದರು.
ಎಲ್ಲರಿಗೂ ಉಚಿತ ಆರೋಗ್ಯ ವಿಮೆ
‘ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಆಯುಷ್ಮಾನ್ ಭಾರತ್ ಯೋಜನೆ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ನೀಡುತ್ತಿದೆ. ಉಚಿತವಾಗಿ ಆರೋಗ್ಯ ವಿಮೆ ನೀಡುತ್ತಿರುವ ಏಕೈಕ ದೇಶ ಭಾರತವಾಗಿದೆ. ಶೂನ್ಯ ಪ್ರಿಮಿಯಂನಲ್ಲಿ 5 ಲಕ್ಷ ರೂಪಾಯಿ ತನಕ ಶಾಶ್ವತ ಆರೋಗ್ಯ ವಿಮೆಯನ್ನು ಸರಕಾರ ನೀಡುತ್ತಿದೆ. ದೇಶದ ಬಡವರ ಆರೋಗ್ಯದ ಮೇಲೆ ಸರಕಾರ ಹೆಚ್ಚಿನ ಗಮನವಿಟ್ಟಿದೆ.
-ಡಾ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ