ದೇಶದಲ್ಲಿ ವಿದ್ಯುತ್ ಸಮಸ್ಯೆ: 240 ಪ್ರಯಾಣಿಕ ರೈಲುಗಳ ಸ್ಥಗಿತ

ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಮಧ್ಯೆ, ದೇಶಾದ್ಯಂತ ಕಲ್ಲಿದ್ದಲು ಹೊತ್ತ 400 ರೈಲುಗಳ ಚಲನೆಗೆ ಅನುಕೂಲವಾಗುವಂತೆ 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಕಳೆದ ವರ್ಷ, ರೈಲ್ವೆ 347 ಕಲ್ಲಿದ್ದಲು ರೇಕ್‌ಗಳನ್ನು ಬಳಸಿತ್ತು. ಈ ವರ್ಷದ 400 ಕಲ್ಲಿದ್ದಲು ರೇಕ್‌ಗಳು ಇದುವರೆಗಿನ ಅತಿ ಹೆಚ್ಚು ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಅನೇಕ ರಾಜ್ಯಗಳು ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ. ಇದಕ್ಕೂ ಮೊದಲು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 16 ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪಾದರಸದ ಮಟ್ಟದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ, ಇದು ವಿದ್ಯುತ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಪರಿಸ್ಥಿತಿ ರಾಷ್ಟ್ರೀಯ ಬಿಕ್ಕಟ್ಟು ಎಂದೂ ಅವರು ಗಮನ ಸೆಳೆದಿದ್ದರು.
ತಕ್ಷಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸರಬರಾಜು ಮಾಡದಿದ್ದರೆ ಆಸ್ಪತ್ರೆಗಳಂತಹ ಪ್ರಮುಖ ಸಂಸ್ಥೆಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗುತ್ತದೆ ಎಂದು ದಿಲ್ಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, "ದೇಶದಲ್ಲಿ ವಿದ್ಯುತ್ ಕೊರತೆಯಿದೆ. ಇಲ್ಲಿಯವರೆಗೆ ನಾವು ಅದನ್ನು ಹೇಗಾದರೂ ದಿಲ್ಲಿಯಲ್ಲಿ ನಿಭಾಯಿಸಿದ್ದೇವೆ. ಇಡೀ ಭಾರತದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಒಟ್ಟಾಗಿ ಅದರ ಪರಿಹಾರವನ್ನು ಕಂಡುಹಿಡಿಯಬೇಕು. ಶೀಘ್ರ, ಈ ಸಮಸ್ಯೆಯನ್ನು ನಿಭಾಯಿಸುವ ಅಗತ್ಯವಿದೆ" ಎಂದಿದ್ದಾರೆ.