ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ: ಎನ್‍ಎಸ್‍ಯುಐ ಸದಸ್ಯರು ವಶಕ್ಕೆ
ಬೆಂಗಳೂರು, ಎ.29: ಲೋಕೋಪಯೋಗಿ ಜೆಇ, ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕರ ನೇಮಕ ಸೇರಿದಂತೆ ವಿವಿಧ ಪರೀಕ್ಷೆಯಲ್ಲಿ ನಡೆದಿರುವ ಹಗರಣ ಸಂಬಂಧ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಎನ್‍ಎಸ್‍ಯುಐ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.
ಶುಕ್ರವಾರ ನಗರದ ಕೆಕೆ ಅತಿಥಿ ಗೃಹದ ಮುಂಭಾಗ ಜಮಾಯಿಸಿದ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದ ತಂಡವು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಅದೇ ರೀತಿ, ಉಪಾಧ್ಯಕ್ಷ ಜಯೇಂದ್ರ ಶಾಹಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಫ್ರೀಡಂ ಪಾರ್ಕಿನಿಂದ ರಾಜ್ಯಪಾಲ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದುರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೀರ್ತಿ ಗಣೇಶ್, ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿ ಮೇಲೆ ನಂಬಿಕೆ ಹೋಗಿದೆ. ಹಣ, ರಾಜಕೀಯ ಪ್ರಭಾವವಿರುವ ವ್ಯಕ್ತಿಗಳು ಮಾತ್ರ ಸರಕಾರಿ ಹುದ್ದೆಗಳನ್ನು ಪಡೆಯುತ್ತಿರುವ ವ್ಯವಸ್ಥೆ ಬಹಿರಂಗವಾಗಿದೆ. ಪ್ರಮುಖವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದರೂ, ರಾಜ್ಯ ಸರಕಾರವು ದಿಟ್ಟ ಕ್ರಮಗಳನ್ನು ಕೈಗೊಳ್ಳದೆ, ಸುಮ್ಮನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ವಿದ್ಯಾರ್ಥಿ, ವಿದ್ಯಾವಂತರ ಬಾಳಲ್ಲಿ ಚೆಲ್ಲಾಟವಾಡುತ್ತಿದೆ. ಯಾವುದೇ ಪರೀಕ್ಷೆಯನ್ನು ನ್ಯಾಯಯುತವಾಗಿ ನಡೆಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಈ ಅಕ್ರಮದ ವಿರುದ್ಧ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಹೋರಾಡುವ ಸಂದರ್ಭ ಬಂದಿದೆ. ಅಲ್ಲದೆ, ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಎಬಿವಿಪಿ ಶಿಕ್ಷಕರು ಹಾಗೂ ಸರಕಾರಿ ನೌಕರರನ್ನು ಈ ಕೂಡಲೇ ಬಂಧಿಸಬೇಕೆಂದು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎನ್‍ಎಸ್‍ಯುಐ ನಾಯಕರಾದ ಮಾರುತಿ, ಲಕ್ಷ್ಯಾ ರಾಜ್, ಅನವೀತ್ ಕಟೀಲ್ ಸೇರಿದಂತೆ ಪ್ರಮುಖರಿದ್ದರು.







