ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯ: ನ್ಯಾ. ನಾಗಮೋಹನದಾಸ್

ನ್ಯಾ. ನಾಗಮೋಹನದಾಸ್
ಬೆಂಗಳೂರು, ಎ.29: ರೈತರ ಭೂಮಿಯನ್ನು ಉಳ್ಳವರಿಗೆ ನೀಡಿ ಅನ್ನದಾತರಿಗೆ ಮೋಸ ಮಾಡುವ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಯಾಗಿ ಪರಿವರ್ತನೆ ಆಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ, ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ವತಿಯಿಂದ ಆಯೋಜಿಸಿದ್ದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮರೀಚಿಕೆ ವಿಷಯದ ಕುರಿತ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ತಿದ್ದುಪಡಿ ಮಸೂದೆಯ ಉದ್ದೇಶ ಅನ್ನದಾತನ ಕೈಯಿಂದ ಭೂಮಿಯನ್ನು ಕಿತ್ತುಕೊಂಡು ಕಾರ್ಪೊರೇಟ್ ಜನರಿಗೆ ನೀಡುವುದಾಗಿದೆ ಎಂದರು.
ಜಗತ್ತಿನಲ್ಲಿ ನಾಗರಿಕತೆಯ ಜೊತೆಜೊತೆಗೆ ಹುಟ್ಟಿಕೊಂಡ ವೃತ್ತಿ ಎಂದರೆ ಅದು ರೈತನ ಕೆಲಸ. ಆದರೆ ಅಂದಿನಿಂದ ಇಂದಿನವರೆಗೂ ಶೋಷಣೆಗೆ ಒಳಗಾಗುತ್ತಲೇ ಇದ್ದಾನೆ. ರೈತರ ಬೆಂಬಲ ಬೆಲೆ ಕೇಳುವುದು ನ್ಯಾಯಯುತವಾಗಿದೆ. ಆದರೆ ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ದೊರಕುತ್ತಿಲ್ಲ. ಅಲ್ಲದೆ, ರೈತರ ಪರ ಸರಕಾರದ ನಿರ್ಲಕ್ಷ್ಯತನವನ್ನು ತೋರುತ್ತದೆ. ಇದರ ವಿರುದ್ಧ ರೈತರು ಎಲ್ಲರೂ ಒಗ್ಗೂಡಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ಬಾಗಲಕೋಟೆ ತೋಟಗಾರಿಕೆ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ, ರಾಜ್ಯ ಕೃಷಿ ಮಾರಾಟ ಮಂಡಳಿಯ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ಬಿ.ಎನ್.ಹುಂಬರವಾಡಿ, ತುಮಕೂರಿನ ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್, ರೈತ ಮುಖಂಡ ಸಿದ್ದನಗೌಡ ಪಾಟೀಲ್ ಮತ್ತಿತರರಿದ್ದರು.







