ಮಂಗಳೂರು: ಸ್ಲ್ಯಾಬ್ ಕುಸಿದು ಕಾರ್ಮಿಕ ಮೃತ್ಯು, ಇಬ್ಬರು ಗಂಭೀರ

ಮಂಗಳೂರು : ನಗರದ ಉರ್ವ ಮಾರಿಗುಡಿ ದೇವಳದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಗೋವಾ ಮೂಲದ ಸಲೀಂ ಶೇಖ್ (45) ಮೃತಪಟ್ಟ ಕಾರ್ಮಿಕ. ಕಾವೂರು ಸಮೀಪದ ಪಂಜಿಮೊಗರು ನಿವಾಸಿ ಕಿರಣ್ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬದ ಹನುಮಂತ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಕೂಡಲೇ ಪ್ರಜ್ಞೆ ತಪ್ಪಿ ಬಿದ್ದ ಸಲೀಂ ಶೇಖ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದಾಗಿ ಘೋಷಿಸಿದರು. ತಲೆಗೆ ಗಂಭೀರ ಸ್ವರೂಪದ ಗಾಯವಾದ ಪರಿಣಾಮ ಅವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಮೂಲದ ಉದ್ಯಮಿಗೆ ಸೇರಿದ ಈ ಸೈಟ್‌ನಲ್ಲಿ ಮನೆ ನಿರ್ಮಾಣವಾಗುತ್ತಿದೆ. ಕಾಂಕ್ರೀಟ್ ಸ್ಲ್ಯಾಬ್‌ಗೆ ಸಪೋರ್ಟ್ ನೀಡಿದ್ದ ಕಂಬಗಳನ್ನು ತೆರವು ಮಾಡುತ್ತಿದ್ದಾಗ ಏಕಾಏಕಿ ಸ್ಲ್ಯಾಬ್ ಕುಸಿದು ನೆಲಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ. ಈ ವೇಳೆ ಸಪೋರ್ಟ್ ತೆರವು ಮಾಡುತ್ತಿದ್ದ ಕಿರಣ್ ಮತ್ತು ಹನುಮಂತರ ಮೈ ಮೇಲೆ ಸ್ಲ್ಯಾಬ್ ಬಿದ್ದಿದೆ.
ಉರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದ್ದಾರೆ. ಕಟ್ಟಡ ಕಾಮಗಾರಿಯಲ್ಲಾದ ಲೋಪದಿಂದಾಗಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಮನೆ ಮಾಲಕ, ಗುತ್ತಿಗೆದಾರ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.







