ಮೇಲಂಗಡಿ : ಯುವಕನಿಗೆ ಚೂರಿ ಇರಿತ

ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನಿಗೆ ಟ್ಯಾಂಕರ್ ಚಾಲಕ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಮೇಲಂಗಡಿ ಬಳಿ ಶುಕ್ರವಾರ ನಡೆದಿದೆ.
ಬಬ್ಬಕಟ್ಟ ನಿವಾಸಿ ರಿಝ್ವಾನ್ (24) ಎಂಬಾತ ಚೂರಿ ಇರಿತಕ್ಕೊಳಗಾದವರು. ಇವರಿಗೆ ಟ್ಯಾಂಕರ್ ಚಾಲಕ ಬಸ್ತಿಪಡ್ಪು ನಿವಾಸಿ ಖಲೀಲ್ ಚೂರಿಯಿಂದ ಇರಿದಿದ್ದಾನೆ ಎಂದು ದೂರಲಾಗಿದೆ.
ಘಟನೆಯ ವಿವರ
ಟ್ಯಾಂಕರ್ ಚಾಲಕ ಖಲೀಲ್ ಶುಕ್ರವಾರ ರಿಝ್ವಾನ್ ಅವರ ಮನೆಗೆ ನೀರು ಸರಬರಾಜು ಮಾಡದೇ ಹೋಗಿದ್ದು, ಈ ವಿಚಾರವನ್ನು ಖಲೀಲ್ ಬಳಿ ರಿಝ್ವಾನ್ ರ ತಾಯಿ ವಿಚಾರಿಸಿದ್ದರು. ಈ ವೇಳೆ ಖಲೀಲ್ ಅವರನ್ನು ನಿಂದಿಸಿದ್ದ ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಇಂದು ಸಂಜೆ ವೇಳೆ ರಿಝ್ವಾನ್ ಮೇಲಂಗಡಿ ಸಮೀಪ ಖಲೀಲ್ ನಲ್ಲಿ ವಿಚಾರಿಸಿದ್ದ. ಈ ಸಂದರ್ಭ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಟ್ಯಾಂಕರ್ ಚಾಲಕ ಖಲೀಲ್ ರಿಝ್ವಾನ್ ಗೆ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಗೊಂಡ ರಿಝ್ವಾನ್ ರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





