ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಸೇರಿ 6 ಮಂದಿ 11 ದಿನ ಸಿಐಡಿ ಕಸ್ಟಡಿಗೆ

ಬೆಂಗಳೂರು, ಎ.29: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಸೇರಿ ಆರು ಮಂದಿಯನ್ನು ಕಲಬುರಗಿ 3ನೆ ಜೆಎಂಎಫ್ ಕೋರ್ಟ್ ವಿಚಾರಣೆಗಾಗಿ 11 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಶಿಕ್ಷಕಿ ಅರ್ಚನಾ, ಸುನಿತಾ, ಕಾಳಿದಾಸ್, ಜ್ಯೋತಿ ಪಾಟೀಲ್, ಸುರೇಶ್ ಕಾಟೇಗಾಂವ್, ಸದ್ದಾಂ ಹಾಗೂ ದಿವ್ಯಾ ಹಾಗರಗಿ, ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಲು ನ್ಯಾಯಾಧೀಶರ ಬಳಿ ಸಿಐಡಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು, ಅದರಂತೆ ಅವರನ್ನು ವಶಕ್ಕೆ ನೀಡಲು ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.
545 ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಬಳಿಕ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದರು.
ಪಿಎಸ್‍ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡವು ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ್ ಹಾಗರಗಿಯನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್‍ಮ್ಯಾನ್ ಹಯ್ಯಾಳಿ ದೇಸಾಯಿ ಸೇರಿ ಆರು ಜನರ ಸಿಐಡಿ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆ ಅವರನ್ನು ಶುಕ್ರವಾರ ಮರಳಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.







