ಮೇ 1ರ ಕಸಾಪ ಸಭೆಗೆ ಸಾಹಿತಿಗಳಿಂದ ಭಿನ್ನಮತ

ಬೆಂಗಳೂರು, ಎ.29: ಕನ್ನಡ ಸಾಹಿತ್ಯ ಪರಿಷತ್ತಿನ ಮೇ 1ರಂದು ಆಯೋಜಿಸಿರುವ ಸಭೆಗಳಿಗೆ ದು.ಸರಸ್ವತಿ, ಮೂಡ್ನಾಕೂಡು ಚಿನ್ನಸ್ವಾಮಿ, ಬಿ.ಟಿ.ಜಾಹ್ನವಿ, ಡಾ.ಅರುಂಧತಿ, ಸಬಿಹಾ ಭೂಮಿಗೌಡ, ವಿನಯಾ ವಕ್ಕುಂದ, ಬಿ.ಸುರೇಶ್, ಲಡಾಯಿ ಬಸೂ ಸೇರಿದಂತೆ ಹಲವಾರು ಸಾಹಿತಿಗಳು ಭಿನ್ನಮತ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆ ಮತ್ತು ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಮೇ 1ರಂದು ಆಯೋಜಿಸಲಾಗಿದೆ. ಮೇ 1 ಅಂತರ್‍ರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಾಗಿದ್ದು, ತಮ್ಮ ಶ್ರಮದ ಮೂಲಕ ನಾಡು, ನುಡಿ, ಸಂಸ್ಕøತಿಗೆ ಮತ್ತು ಸಂಪತ್ತಿಗೆ ಶ್ರಮಿಕರು ನೀಡುವ ಕೊಡುಗೆಯನ್ನು ನೆನೆಯುವ, ಗೌರವಿಸುವ ದಿನವಾಗಿದೆ. ಕಸಾಪದಂತಹ ಸಾರ್ವಜನಿಕ ಸಂಸ್ಥೆಯು ಕಾರ್ಮಿಕರ ದಿನಾಚರಣೆಯಂದು ಸಭೆ ಕರೆಯುವ ಕುರಿತು ಯೋಚಿಸದಿರುವುದು ವಿಷಾದನೀಯ ಎಂದು ಅವರು ಪ್ರಕಟನೆಯಲ್ಲಿ ಖಂಡಿಸಿದ್ದಾರೆ.
ಕಸಾಪದ ಸದಸ್ಯರುಗಳು, ಸಾಹಿತಿಗಳು, ಕನ್ನಡ ನಾಡು, ನುಡಿ, ಶ್ರಮಿಕರ ಕೊಡುಗೆಯನ್ನು ಗೌರವಿಸುವ ನಮಗೆಲ್ಲರಿಗೂ ಈ ಸಭೆಯಲ್ಲಿ ಕನ್ನಡದ ಸಮಸ್ಯೆಗಳಂತೆಯೇ ಕಾರ್ಮಿಕರ ಸಮಸ್ಯೆಗಳೂ ಸಹ ಚರ್ಚೆಯಾಗಬೇಕು. ಕಾರ್ಮಿಕರ ವಿಷಯಗಳು, ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಗವಾಗುವಂತೆ ಸಭೆಯು ತೀರ್ಮಾನ ತೆಗೆದುಕೊಳ್ಳಬೇಕು. ಅಂತಹ ನಿರ್ಣಯ ಇಲ್ಲದೆ ಕಾರ್ಮಿಕರ ದಿನದಂದು ಕಸಾಪದ ಸರ್ವಸದಸ್ಯರ ಸಭೆ ನಡೆಯುವುದಾದರೆ ಅದಕ್ಕೆ ನಮ್ಮೆಲ್ಲರ ಭಿನ್ನಮತ ಇರುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.





