ಹಿಂದಿ ಎಂದ ಕೂಡಲೇ ಭೂತವೋ ಸೈತಾನೋ ಎನ್ನುವಂತೆ ನೋಡಬೇಡಿ: ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ
ಮೈಸೂರು,ಎ.29: ಸಂವಿಧಾನ ಯಾವೊದೋ ಒಂದು ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನ ಕೊಟ್ಟಿಲ್ಲ, ಹಿಂದಿ ರಾಷ್ಟ್ರ ಭಾಷೆ ಮಾಡುತ್ತೇವೆ ಎಂದು ಹೇಳಿದವರು ಯಾರು? ಕನ್ನಡವೂ ರಾಷ್ಟ್ರೀಯ ಭಾಷೆಯೇ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಹಿಂದಿ ರಾಷ್ಟ್ರೀಯ ಭಾಷೆ ವಿವಾದ ಬಗ್ಗೆ ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಒಂದನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆ, 5 ನೇ ತರಗತಿಯಲ್ಲಿ ಇಂಗ್ಲೀಷ್ ದ್ವಿತೀಯ ಭಾಷೆ, 8ನೇ ತರಗತಿಗೆ ಹೋದಾಗ ಹಿಂದಿ ತೃತೀಯ ಭಾಷೆ ಆಗಿತ್ತು. ಈಗ ಶಾಲೆಗಳಲ್ಲಿ 6ನೇ ತರಗತಿಯಿಂದ ಹಿಂದಿ ಕಲಿಸಲಾಗುತ್ತಿದೆ. ಹಿಂದಿ ಎಂದ ಕೂಡಲೇ ಭೂತವೋ ಸೈತಾನೋ ಎನ್ನುವಂತೆ ನೋಡಬೇಡಿ ಎಂದು ಹೇಳಿದರು.
'ಹಿಂದಿ ರಾಷ್ಟ್ರೀಯ ಭಾಷೆ ಮಾಡುತ್ತೇವೆ ಎಂದು ಹೇಳಿದವರು ಯಾರು, ಹಿಂದಿ ಹಾಗೂ ಇಂಗ್ಲೀಷ್ ಸಂಪರ್ಕ ಭಾಷೆಗಳು, ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆ' ಎಂದು ಹೇಳಿದರು.
ನೋಟಿನಲ್ಲಿರುವ 15 ಭಾಷೆಗಳೂ ರಾಷ್ಟ್ರೀಯ ಭಾಷೆಗಳೆ, ಉಳಿದಿರುವ ಲಿಪಿ ಇರುವ ಇಲ್ಲದಿರುವ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ, ಸಂವಿಧಾನ ಯಾವುದೋ ಒಂದು ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನ ಕೊಟ್ಟಿಲ್ಲ, ಆದರೆ ಹಿಂದಿ ಹಾಗೂ ಇಂಗ್ಲೀಷ್ ಅಧಿಕೃತ ಸಂಪರ್ಕ ಭಾಷೆ ಮಾಡಲಾಗಿದೆ. ಹಾಗಾಗಿ ಕೇಂದ್ರ ಸಚಿವ ಅಮಿತ್ ಶಾ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದಿದ್ದಾರೆ ಎಂದರು.
ತಮಿಳುನಾಡು, ಕೇರಳ, ಆಂಧ್ರದಲ್ಲಿ ಭಾಷೆ ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತದೆ. ಆದರೆ ಕರ್ನಾಟಕ ಉದಾರತೆಗೆ ಹೆಸರಾಗಿರುವ ರಾಜ್ಯ, ಕೆಲ ರಾಜಕಾರಣಿಗಳು ಸುಮ್ಮನೆ ಅಮಿತ್ ಶಾ ಹೇಳಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ತಮಿಳುನಾಡಿಗೆ ಹೋಗಿ ನಾನು ತಮಿಳಿನಲ್ಲಿ ಮಾತನಾಡಲು ಆಗಲ್ಲ, ಹರುಕು ಮುರುಕು ಹಿಂದಿಯಲ್ಲಿ ಮಾತನಾಡುತ್ತೇನೆ. ಕರ್ನಾಟಕದವರು ಹೃದಯ ವೈಶಾಲ್ಯ ಹೊಂದಿರುವವರು, ಉತ್ತರ ಕರ್ನಾಟಕದಲ್ಲಿ ಮರಾಠಿ, ಹಿಂದಿ, ರಾಯಚೂರು ಭಾಗದಲ್ಲಿ ತೆಲುಗು ಬಳಕೆ ಮಾಡುತ್ತಾರೆ. ಇದರಲ್ಲಿ ರಾಜಕಾರಣ ಬೇಡ, ಬೆಂಗಳೂರಿನಲ್ಲಿ ತೆಲುಗು, ತಮಿಳು ಭಾಷೆ ಬಳಸಿದಾಗ ಬಾರದ ಅಸ್ಮಿತೆ ಹಿಂದಿಗೆ ಏಕೆ ಎಂದು ಪ್ರಶ್ನಿಸಿದರು.
ಪಿಎಸ್ಐ ಪರೀಕ್ಷೆಯಲ್ಲಿ ಯಾರು ಅಕ್ರಮ ಎಸಗಿದ್ದಾರೊ ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ. ಪ್ರಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿ ಯಾವ ಪಕ್ಷದವರೇ ಇರಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಪಿಎಸ್ಐ ಪರೀಕ್ಷಾ ಅಕ್ರಮದ ಬಗ್ಗೆ ದಾಖಲೆ ಇದೆ ಎಂದ ಶಾಸಕ ಪ್ರಿಯಾಂಕ ಖರ್ಗೆ ಹಿಟ್ ಅಂಡ್ ರನ್ ನಾಯಕ, ನೋಟಿಸ್ಗೆ ಉತ್ತರ ನೀಡದೆ ಉಗುಳಿ ಓಡಿ ಹೋಗಿದ್ದಾರೆ. ಅವರೊಬ್ಬ ಹೇಳಿಕೆಯ ಶೂರ ಎಂದು ಜರಿದರು.