ಜನರ ಕುಂದು ಕೊರತೆ ನಿವಾರಣೆಗಾಗಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಸಿದ್ಧಗೊಳಿಸಿದ ಬಿಬಿಎಂಪಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.29: ಸಾರ್ವಜನಿಕರು ತಮ್ಮ ಬೀದಿಯಲ್ಲಿರುವ ಸಮಸ್ಯೆಗಳಾದ ರಸ್ತೆ ಗುಂಡಿ, ಕಸ, ಬೀದಿ ದೀಪ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಫೋಟೊ ಸಮೇತ ದೂರು ನೀಡಲು ಮತ್ತು ಆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುವ ಸಲುವಾಗಿ ಬಿಬಿಎಂಪಿಯು ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೊಬೈಲ್ ಹಾಗೂ ಡೆಸ್ಕ್ಟಾಪ್ ಆಪ್ ಅನ್ನು ಉನ್ನತೀಕರಿಸಲಾಗಿದೆ.
ನಾಗರಿಕರು ತಮ್ಮ ಪ್ರದೇಶದಲ್ಲಿನ ಸಮಸ್ಯೆಗಳ ಬಗ್ಗೆ ನಮ್ಮ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ನಲ್ಲಿ ಲಾಗಿನ್ ಆದ ಬಳಿಕ ಜಿಯೋ ಲೊಕೇಷನ್ ಉಳ್ಳ ಫೋಟೊ ಸಮೇತ ನೀಡುವ ದೂರುಗಳು ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ಗೆ ರವಾನೆಯಾಗುತ್ತದೆ. ಆ ಬಳಿಕ ಸಂಬಂಧಪಟ್ಟ ಅಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಲಿದ್ದಾರೆ. ನಂತರ ಸಮಸ್ಯೆ ನಿವಾರಿಸಿದ ಕುರಿತು ಫೋಟೊ ಸಹಿತ ಮಾಹಿತಿಯನ್ನು ದೂರುದಾರರಿಗೆ ಕಳುಹಿಸಲಾಗುತ್ತದೆ. ನಾಗರಿಕರು ನೀಡುವ ದೂರುಗಳ ಸ್ಥಿತಿಯನ್ನು ಆ್ಯಪ್ನಲ್ಲಿ ಪರಿಶೀಲನೆ ನಡೆಸಬಹುದಾಗಿದೆ. ಪಾಲಿಕೆಯಿಂದ ಬಗೆಹರಿಸಬಹುದಾದ ಸಮಸ್ಯೆಗಳನ್ನು ನಿಗದಿತ ಕಾಲಾವಧಿಯೊಳಗೆ ಇತ್ಯರ್ಥಪಡಿಸಲಾಗುತ್ತದೆ. ಬೆಸ್ಕಾಂ, ಜಲಮಂಡಳಿ ಮತ್ತು ಇತರೆ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನು ರವಾನಿಸಲಾಗುತ್ತದೆ.





