ರೌಡಿಶೀಟರ್ ರಾಹುಲ್ ಕೊಲೆ ಪ್ರಕರಣ : ತಲೆಮರೆಸಿಕೊಂಡ ಆರೋಪಿಗಳು

ರಾಹುಲ್
ಮಂಗಳೂರು : ನಗರದ ಪಾಂಡೇಶ್ವರ ಬಳಿಯ ಎಮ್ಮೆಕೆರೆ ಮೈದಾನದ ಬಳಿ ಗುರುವಾರ ಸಂಜೆ ರೌಡಿ ಶೀಟರ್ ಹೊಯ್ಗೆಬಜಾರ್ ನಿವಾಸಿ ರಾಹುಲ್ ತಿಂಗಳಾಯ ಯಾನೆ ಕಕ್ಕೆ (26) ಎಂಬಾತನನ್ನು ಕಡಿದು ಕೊಲೆಗೈದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಎಮ್ಮೆಕೆರೆ ಬಳಿ ಕೋಳಿ ಅಂಕಕ್ಕೆ ಬಂದು ಹಿಂತಿರುಗುತ್ತಿದ್ದಾಗ ರಾಹುಲ್ನನ್ನು ಅಟ್ಟಿಸಿಕೊಂಡು ಬಂದ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್, ಸುಶಿತ್ ಹಾಗೂ ಇನ್ನೋರ್ವನ ಸಹಿತ ನಾಲ್ವರ ತಂಡ ಮೈದಾನದ ಬಳಿ ತಲವಾರುಗಳಿಂದ ಯದ್ವಾತದ್ವಾ ದಾಳಿಗೈದು ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಹೊಯ್ಗೆ ಬಜಾರ್ನ ರೌಡಿ ತಂಡದಲ್ಲಿ ಗುರುತಿಸಿಕೊಂಡಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ದ್ವೇಷದಿಂದ ರಾಹುಲ್ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಹುಲ್ ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂದಿದ್ದ ಬಗ್ಗೆ ಮಾಹಿತಿ ಪಡೆದ ದುಷ್ಕರ್ಮಿಗಳ ತಂಡ ತಕ್ಷಣ ಸಂಚು ರೂಪಿಸಿ ಕೊಲೆಗೈದಿದೆ. ಆರೋಪಿಗಳು ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.