ಚಿಂತನ ಶಿಬಿರದ ಬಳಿಕ ‘ಒಬ್ಬ ವ್ಯಕ್ತಿ ಒಂದು ಹುದ್ದೆʼ ನಿಯಮವನ್ನು ಅಳವಡಿಸಿಕೊಳ್ಳಲಿರುವ ಕಾಂಗ್ರೆಸ್

PHOTO PTI
ಹೊಸದಿಲ್ಲಿ,ಎ.29: ಕಮಲನಾಥ್ ಅವರು ಮಧ್ಯಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ‘ಚಿಂತನ ಶಿಬಿರ ’ದ ಬಳಿಕ ಎಐಸಿಸಿ ಮತ್ತು ರಾಜ್ಯ ಮಟ್ಟದಲ್ಲಿ ‘ಒಬ್ಬ ವ್ಯಕ್ತಿ ಒಂದು ಹುದ್ದೆ ’ ನಿಯಮವನ್ನು ಜಾರಿಗೊಳಿಸಲು ಸಜ್ಜಾಗುತ್ತಿದೆ.
ಎರಡು ಹುದ್ದೆಗಳನ್ನು ಹೊಂದಿರುವ ಹಲವಾರು ಕಾಂಗ್ರೆಸ್ ನಾಯಕರು ಕ್ರಮೇಣ ನೂತನ ನಿಯಮದ ಬಿಸಿಯನ್ನು ಅನುಭವಿಸಲಿದ್ದಾರೆ. ರಾಜ್ಯ ಘಟಕವು ಹೆಚ್ಚು ಚುರುಕಾಗಿ ಕಾರ್ಯ ನಿರ್ವಹಿಸಬೇಕು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪಕ್ಷವು ಬಯಸಿದೆ. ಎರಡು ಅಥವಾ ಹೆಚ್ಚಿನ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಒಂದು ಸಲಕ್ಕೆ ಒಂದು ಹುದ್ದೆಯನ್ನು ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಆಧೀರ್ ರಂಜನ್ ಚೌಧರಿ, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಮುಕುಲ ವಾಸ್ನಿಕ್ರಂತಹ ಕಾಂಗ್ರೆಸ್ ನಾಯಕರು ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿದ್ದಾರೆ.
ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಗುರುವಾರ ವಿಪಕ್ಷ ನಾಯಕನ ಹುದ್ದೆಗೆ ಸಲ್ಲಿಸಿರುವ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಅಂಗೀಕರಿಸಿದ್ದು,ನೂತನ ಪ್ರತಿಪಕ್ಷ ನಾಯಕನಾಗಿ ಗೋವಿಂದ ಸಿಂಗ್ ಅವರನ್ನು ನೇಮಕಗೊಳಿಸಿದ್ದಾರೆ. ಕಮಲನಾಥ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಕಮಲನಾಥ್ ಎರಡು ಹುದ್ದೆಗಳನ್ನು ಹೊಂದಿದ್ದಕ್ಕಾಗಿ ಕಳೆದ ಕೆಲವು ದಿನಗಳಿಂದ ಬಿಜೆಪಿಯ ಟೀಕೆಗಳಿಗೆ ಗುರಿಯಾಗಿದ್ದರು. ಅವರ ಹೊಣೆಗಾರಿಕೆಗಳ ಬಗ್ಗೆ ಬಿಜೆಪಿ ನಿರಂತರವಾಗಿ ಪ್ರಶ್ನಿಸುತ್ತಲೇ ಇತ್ತು.







