ಅಲ್ ಅಕ್ಸಾ ಮಸೀದಿ ಆವರಣದಲ್ಲಿ ಇಸ್ರೇಲಿ ಪೊಲೀಸರು- ಫೆಲೆಸ್ತೀನಿಯರ ಮಧ್ಯೆ ಘರ್ಷಣೆ

PHOTO:TWITTER
ಜೆರುಸಲೇಂ,ಎ.29: ಜೆರುಸಲೇಂನ ಇತಿಹಾಸ ಪ್ರಸಿದ್ಧ ಅಲ್ ಅಕ್ಸಾ ಮಸೀದಿಯ ಆವರಣದಲ್ಲಿ ಶುಕ್ರವಾರ ಫೆಲೆಸ್ತೀನಿಯರು ಹಾಗೂ ಇಸ್ರೇಲಿ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 42 ಮಂದಿ ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲವಾದರೂ 22 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಫೆಲೆಸ್ತೀನ್ ರೆಡ್ಕ್ರಿಸೆಂಟ್ ವೈದ್ಯಕೀಯ ಸೇವಾದಳ ತಿಳಿಸಿದೆ.ಮಸೀದಿಯ ಆವರಣದೊಳಗಿದ್ದ ಕೆಲವು ಯುವಕರು ಶುಕ್ರವಾರ ಮುಂಜಾನೆಯ ವೇಳೆ ಪೊಲೀಸರ ಮೇಲೆ ಕಲ್ಲುಗಳು ಹಾಗೂ ಸುಡುಮದ್ದುಗಳನ್ನು ಎಸೆಯುತ್ತಿರುವ ದೃಶ್ಯಗಳ ವಿಡಿಯೋವನ್ನು ಇಸ್ರೇಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಇದಾದ ಆನಂತರ ಪೊಲೀಸ್ ಅಧಿಕಾರಿಗಳು ಅಲ್ಆಕ್ಸಾ ಮಸೀದಿಯ ಆವರಣವನ್ನು ಪ್ರವೇಶಿಸಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಫೆಲೆಸ್ತೀನ್ ನಾಗರಿಕರ ನಡುವೆ ಘರ್ಷಣೆ ನಡೆಯಿತೆನ್ನಲಾಗಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಿರುವುದಾಗಿ ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರನ್ನು ಕಲ್ಲೆಸೆತದ ಆರೋಪದಲ್ಲಿ ಮತ್ತು ಇನ್ನೋರ್ವನನ್ನು ಗಲಭೆಗೆ ಗುಂಪನ್ನು ಪ್ರಚೋದಿಸಿದ ಆರೋಪದಲ್ಲಿ ಬಂಧಿಸಲಾಗಿದೆಯೆಂದು ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಅಲ್ಅಕ್ಸಾ ಮಸೀದಿಯಲ್ಲಿ ಹಲವು ಬಾರಿ ನಡೆದ ಘರ್ಷಣೆಗಳಲ್ಲಿ ಒಟ್ಟು 300 ಫೆಲೆಸ್ತೀನಿಯರು ಗಾಯಗೊಂಡಿದ್ದರು. ಇಸ್ಲಾಂನ ಮೂರನೇ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾದ ಅಲ್ ಅಕ್ಸಾ ಮಸೀದಿಯು ಯೆಹೂದಿಗಳಿಗೂ ಪವಿತ್ರ ತಾಣವಾಗಿದೆ. ಪೂರ್ವ ಜೆರುಸಲೇಂನಲ್ಲಿರುವ ಈ ಮಸೀದಿಯನ್ನು ಇಸ್ರೇಲ್ ಆರು ದಿನಗಳ ಯುದ್ಧದ ಬಳಿಕ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಇಸ್ರೇಲ್ನ ಈ ಅತಿಕ್ರಮಣಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ದೊರೆತಿಲ್ಲ.







