ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು

Photo: PTI
ಪಾಟಿಯಾಲ (ಪಂಜಾಬ್), ಎ. 29: ಖಲಿಸ್ತಾನ ಪರ ಶಕ್ತಿಗಳ ವಿರುದ್ಧ ರ್ಯಾಲಿ ನಡೆಸಿದ ಸಂದರ್ಭ ಶುಕ್ರವಾರ ಪಂಜಾಬ್ ನ ಪಾಟಿಯಾಲದಲ್ಲಿ ಶಿವಸೇನೆ (ಬಾಳಾ ಠಾಕ್ರೆ) ಗುಂಪು ಹಾಗೂ ನಿಹಾಂಗ್, ಸಿಕ್ಖ್ ಸಾಮಾಜಿಕ ಹೋರಾಟಗಾರರ ನಡುವೆ ಘರ್ಷಣೆ ನಡೆದಿದೆ. ಕಾಳಿ ಮಾತಾ ದೇವಾಲಯದತ್ತ ನಿಹಾಂಗ್ ಹಾಗೂ ಸಿಕ್ಖರು ಪ್ರತಿಭಟನಾ ರ್ಯಾಲಿ ನಡೆಸಿ ಶಿವಸೇನೆಯ ಪ್ರತಿಭಟನಾ ರ್ಯಾಲಿಗೆ ವಿರುದ್ಧವಾಗಿ ಖಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಘರ್ಷಣೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಿಹಾಂಗರು ಹಾಗೂ ಸಿಕ್ಖರು ಪಟ್ಟು ಬಿಡಲಿಲ್ಲ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಕೆಲವು ಪ್ರತಿಭಟನಕಾರರ ಮೇಲೆ ದಾಳಿ ನಡೆಸಲಾಗಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಆರಂಭವಾಗಿತ್ತು ಎಂದು ಪಟಿಯಾಲ ವಲಯ ಐಜಿಪಿ ರಾಕೇಶ್ ಅಗರ್ವಾಲ್ ಹೇಳಿದ್ದಾರೆ.
ಎರಡು ಗುಂಪುಗಳ ಸದಸ್ಯರ ನಡುವೆ ನಡೆದ ಘರ್ಷಣೆ ಹಾಗೂ ಕಲ್ಲು ತೂರಾಟದಲ್ಲಿ ಕನಿಷ್ಠ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ನಗರದಲ್ಲಿ ಶುಕ್ರವಾರ ಸಂಜೆ 7 ಗಂಟೆಯಿಂದ ಶನಿವಾರ ಬೆಳಗ್ಗೆ 6ರ ಗಂಟೆ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಶುಕ್ರವಾರ ಅಪರಾಹ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಾವು ಹೊರಗಿನಿಂದ ಭದ್ರತಾ ಪಡೆಯನ್ನು ಕರೆಸಿದ್ದೇವೆ. ಉಪ ಆಯುಕ್ತರು ಶಾಂತಿ ಸಭೆ ನಡೆಸಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾರೆ.
ರ್ಯಾಲಿ ನಡೆಸಲು ಶಿವಸೇನೆ ಅನುಮತಿ ಪಡೆದಿರಲಿಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹಿಂಸಾಚಾರ ನಡೆದ ಗಂಟೆಗಳ ಬಳಿಕ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿರುವುದಕ್ಕಾಗಿ ಶಿವಸೇನೆ ತನ್ನ ಪಂಜಾಬ್ ಘಟಕದ ಕಾರ್ಯಾಧ್ಯಕ್ಷರನ್ನು ವಜಾಗೊಳಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಈ ಘಟನೆಯನ್ನು ದುರಾದೃಷ್ಟಕರ ಎಂದು ಕರೆದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಯಾರೊಬ್ಬರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.







