ಸಮುದ್ರ ಮಾರ್ಗವಾಗಿ ಯುರೋಪ್ ಪ್ರವೇಶಿಸಲು ಯತ್ನ: 2020ರಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಮೃತ್ಯು

photo:twitter
ಜಿನೇವಾ, ಎ.29: ಕಳೆದ ವರ್ಷ ಮೆಡಿಟರೇನಿಯನ್ ಹಾಗೂ ಅಟ್ಲಾಂಟಿಕ್ ಸಮುದ್ರ ಮಾರ್ಗವಾಗಿ ಯುರೋಪ್ ಖಂಡವನ್ನು ತಲುಪಲು ಯತ್ನಿಸಿದ್ದವರಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಇದು 2020ರಲ್ಲಿ ನಡೆದುದಕ್ಕಿಂತ ಎರಡು ಪಟ್ಟು ಅಧಿಕವೆಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
ಯುರೋಪ್ ತಲುಪಲು ಯತ್ನಿಸಿದ ನಿರಾಶ್ರಿತರು, ಆಶ್ರಯ ಕೋರುವವರು ಹಾಗೂ ಇತರ ವಲಸಿಗರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಆಗ್ರಹಿಸಿದೆ. ಕಳೆದ ವರ್ಷ ಮೆಡಿಟರೇನಿಯನ್ ಹಾಗೂ ಅಟ್ಲಾಂಟಿಕ್ ಸಮುದ್ರ ಮಾರ್ಗವಾಗಿ ಯುರೋಪ್ ತಲುಪುವ ಯತ್ನದಲ್ಲಿ ಒಟ್ಟು 3077 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು 2020ರಲ್ಲಿ ಇದ್ದುದಕ್ಕಿಂತ 1544ರಷ್ಟು ಅಧಿಕವಾಗಿದೆ ಎಂದರು. ‘‘ ಆತಂಕಕಾರಿಯೆಂದರೆ, ಈ ವರ್ಷದ ಆರಂಭದಿಂದೀಚೆಗೆ ಇನ್ನೂ 476 ಮಂದಿ ಸಮುದ್ರದಲ್ಲಿ ಸಾವನ್ನಪ್ಪಿದ್ದಾರೆ ಇಲ್ಲವೇ ನಾಪತ್ತೆಯಾಗಿದ್ದಾರೆಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಸಮಿತಿಯ ವಕ್ತಾರೆ ಶಬಿಯಾ ಮಂಟೂ ಜಿನೇವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.2021ರಲ್ಲಿ ಕೇಂದ್ರ ಹಾಗೂ ಪಶ್ಚಿಮ ಮೆಡಿಟರೇನಿಯನ್ ಮಾರ್ಗಗಳಲ್ಲಿ 1924 ಮಂದಿ ಸಾವನ್ನಪ್ಪಿದ್ದಾರೆ ಇಲ್ಲವೇ ನಾಪತ್ತೆಯಾಗಿದ್ದರೆ, ಉಳಿದ 1153 ಮಂದಿ ಉತ್ತರ ಆಫ್ರಿಕದ ಸಮುದ್ರಯಾನ ಮಾರ್ಗವಾಗಿ ಕ್ಯಾನರಿ ದ್ವೀಪವನ್ನು ತಲುಪುವ ಯತ್ನದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದರು.
ಇವುಗಳಲ್ಲಿ ಬಹುತೇಕ ದುರಂತಗಳು ಪ್ರಯಾಣಿಕರಿಂದ ಕಿಕ್ಕಿರಿದಿರುವ, ಸಮುದ್ರ ಪ್ರಯಾಣಕ್ಕೆ ಅಯೋಗ್ಯವಾದ , ಗಾಳಿಯನ್ನು ತುಂಬಿಸಿಕೊಂಡು ಚಲಿಸುವ ದೋಣಿಗಳಲ್ಲಿ ಸಂಭವಿಸಿವೆ. ಇವುಗಳಲ್ಲಿ ಹೆಚ್ಚಿನ ಅವಘಡಗಲು ದೋಣಿ ಮುಳುಗಡೆಯಾಗಿ ಇಲ್ಲವೇ ದೋಣಿಗಳಲ್ಲಿನ ಗಾಳಿ ಸೋರಿಕೆಯಾಗಿ ಸಂಭವಿಸಿವೆ ಎಂದರು. ಮೌರಿಷಾನಿಯಾ ಹಾಗೂ ಸೆನೆಗಲ್ನಂತಹ ಪಶ್ಚಿಮ ಆಫ್ರಿಕ ಕರಾವಳಿಯ ದೇಶಗಳಿಂದ ಕ್ಯಾನರಿ ದ್ವೀಪಸ್ತೋಮವನ್ನು ಸಮುದ್ರ ಮಾರ್ಗವಾಗಿ ತಲುಪಬೇಕಾಗಿದ್ದು, ಈ ಪ್ರಯಾಣವು ಅತ್ಯಂತ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು. ಯುರೋಪ್ ತಲುಪಲು ಬಳಸಲಾಗುವ ಭೂಮಾರ್ಗ ಕೂಡಾ ಅಷ್ಟೇ ಅಪಾಯಕಾರಿಯಾಗಿದೆ ಎಂದು ಯುಎನ್ಎಚ್ಸಿಆರ್ ವರದಿ ತಿಳಿಸಿದೆ.
ಕೋವಿಡ್19 ಸಾಂಕ್ರಾಮಿಕ ಹಾಗೂ ಅದಕ್ಕೆ ಸಂಬಂಧಿಸಿದ ಗಡಿಮುಚ್ಚುಗಡೆಯು, ವಲಸಿಗರ ಪ್ರಯಾಣವನ್ನು ಇನ್ನಷ್ಟು ಜಟಿಲಗೊಳಿಸಿದೆ . ಇದರಿಂದಾಗಿ ಅಪಾಯಕಾರಿ ಮಾರ್ಗಗಳ ಮೂಲಕ ಯುರೋಪ್ ಖಂಡವನ್ನು ತಲುಪಲು ನಿರಾಶ್ರಿತರು ಹಾಗೂ ವಲಸಿಗರು ಕಳ್ಳಸಾಗಣೆದಾರರನ್ನು ಆಶ್ರಯಿಸುತ್ತಿದ್ದಾರೆ ಎಂದು ಮಂಟೂ ತಿಳಿಸಿದರು.







