ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 47 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲು

ಪ್ರಯಾಗ್ರಾಜ್(ಉತ್ತರಪ್ರದೇಶ), ಎ. 29: ಮಾರಣಾಂತಿಕ ಉಷ್ಣ ಮಾರುತ ದೇಶವನ್ನು ವ್ಯಾಪಿಸುತ್ತಿದ್ದು, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ಗರಿಷ್ಠ 47 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲಿ ನಗರದಲ್ಲಿ ಎಪ್ರಿಲ್‌ನಲ್ಲಿ ದಾಖಲಾಗುತ್ತಿರುವ ಅತ್ಯಧಿಕ ಉಷ್ಣಾಂಶ.
ಈ ತಿಂಗಳಲ್ಲಿ ಸಾರ್ವಕಾಲಿಕ ಅತ್ಯಧಿಕ ಉಷ್ಣಾಂಶ 46.3 ಡಿಗ್ರಿ ಸೆಲ್ಶಿಯಸ್. ಇದು 1999 ಎಪ್ರಿಲ್ 30ರಂದು ದಾಖಲಾಗಿತ್ತು. ಕಳೆದ ವರ್ಷ ಇದು 44.3 ಡಿಗ್ರಿ ಸೆಲ್ಶಿಯಸ್ ಹಾಗೂ 2020ರಲ್ಲಿ 43.7 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. 7 ದಿನಗಳ ದಾಖಲೆಯು ಉಷ್ಣಾಂಶ ಕನಿಷ್ಠ ಮೇ 5ರ ವರೆಗೆ 40 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಕ್ಕೆ ಇಳಿಯದು ಎಂಬುದನ್ನು ತೋರಿಸಿದೆ. ಆದರೆ, ಶನಿವಾರದಿಂದ ಉಷ್ಣಾಂಶ ಕ್ರಮೇಣ ಇಳಿಕೆಯಾಗಲಿದೆ.
ಹರ್ಯಾಣ, ದಿಲ್ಲಿ, ಪಶ್ಚಿಮ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಶುಕ್ರವಾರ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ)ಯ ಹಿರಿಯ ವಿಜ್ಞಾನಿ ಆರ್.ಕೆ. ಜೇನಮನಿ ಅವರು ತಿಳಿಸಿದ್ದಾರೆ. ಮೇ 2 ಹಾಗೂ ಮೇ 4ರ ನಡುವೆ ಗುಡುಗಿನಿಂದ ಕೂಡಿದ ಲಘು ಮಳೆಗೆ ರಾಜಸ್ಥಾನ, ದಿಲ್ಲಿ, ಪಂಜಾಬ್ ಹಾಗೂ ಹರ್ಯಾಣ ಸಾಕ್ಷಿಯಾಗಲಿದೆ. ಇಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಶಿಯಸ್ ಹಾಗೂ 39 ಡಿಗ್ರಿ ಸೆಲ್ಶಿಯಸ್ ನಡುವೆ ದಾಖಲಾಗಲಿದೆ ಎಂದು ಜೇನಮನಿ ತಿಳಿಸಿದ್ದಾರೆ. ಉಷ್ಣ ಮಾರುತದಿಂದಾಗಿ ದೇಶದಾದ್ಯಂತ ವಿದ್ಯುತ್ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಕಲ್ಲಿದ್ದಲು ಬೇಡಿಕೆ ಏರಿಕೆಯಾಗಿದೆ. ದಿಲ್ಲಿಯ ಕೆಲವು ಸ್ಥಳಗಳಲ್ಲಿ ಉಷ್ಣಾಂಶ 46 ಡಿಗ್ರಿ ಸೆಲ್ಶಿಯಸ್‌ಗೆ ತಲುಪಿದೆ.







