ನಿರ್ಬಂಧಗಳನ್ನು ಹಿಂಪಡೆದು ಭಾರತೀಯ ವಿದ್ಯಾರ್ಥಿಗಳ ವಾಪಾಸಾತಿಗೆ ಚೀನಾ ಯೋಜನೆ

photo:twitter
ಬೀಜಿಂಗ್,ಎ.29: ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ಚೀನಾವು ವಿಧಿಸಿರುವ ವೀಸಾ ಹಾಗೂ ವಿಮಾನಸಂಚಾರ ನಿರ್ಬಂಧಗಳ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿಯೇ ಸಿಲುಕಿಕೊಂಡಿರುವ ಕೆಲವು ಭಾರತೀಯ ವಿದ್ಯಾರ್ಥಿಗಳು ವಾಪಾಸಾಗಲು ಅನುಮತಿ ನೀಡುವ ಯೋಜನೆಯನ್ನು ಚೀನಾ ಶುಕ್ರವಾರ ಪ್ರಕಟಿಸಿದೆ.
‘‘ ಅಧ್ಯಯನಕ್ಕಾಗಿ ಚೀನಾಕ್ಕೆ ವಾಪಾಸಾಗಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಆತಂಕಗಳಿಗೆ ಚೀನಾವು ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಚೀನಾಕ್ಕೆ ವಿದ್ಯಾರ್ಥಿಗಳ ವಾಪಾಸಾತಿ ಕುರಿತಾಗಿ ಇತರ ರಾಷ್ಟ್ರಗಳ ಅನುಭವ ಹಾಗೂ ಅವು ಅನುಸರಿಸಿರುವ ವಿಧಾನಗಳನ್ನು ನಾವು ಈಗಾಗಲೇ ಭಾರತದ ಜೊತೆ ಹಂಚಿಕೊಂಡಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದಾರೆ.
‘‘ವಾಸ್ತವಿಕವಾಗಿ ಚೀನಾಕ್ಕೆ ಭಾರತೀಯ ವಿದ್ಯಾರ್ಥಿಗಳ ವಾಪಾಸಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.ನಾವು ಚೀನಾಕ್ಕೆ ವಾಪಾಸಾಗಲು ನಿಜಕ್ಕೂ ಅಗತ್ಯವಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಒದಗಿಸುವ ಹೊಣೆಗಾರಿಕೆ ಈಗ ಭಾರತದ್ದಾಗಿದೆೆಯೆಂದು ಅವರು ತಿಳಿಸಿದರು.
ಪ್ರಾಥಮಿಕ ವರದಿಗಳ ಪ್ರಕಾರ ಚೀನಾದಲ್ಲಿ 23 ಸಾವಿಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಚೀನಾದ ಕಾಲೇಜುಗಳಲ್ಲಿ ವೈದ್ಯಕೀಯದ ಅಧ್ಯಯನ ನಡೆಸುತ್ತಿದ್ದಾರೆ. 2019ರ ಡಿಸೆಂಬರ್ನಲ್ಲಿ ಕೊರೋನ ವೈರಸ್ ಸೋಂಕಿನ ಹಾವಳಿ ಉಲ್ಬಣಿಸಿದ ಬಳಿಕ ಅವರು ಭಾರತಕ್ಕೆ ವಾಪಾಸಾಗಿದ್ದು, ಆನಂತರ ಚೀನಾದ ನಿರ್ಬಂಧಗಳಿಂದಾಗಿ ಅವರಿಗೆ ಅಧ್ಯಯನಕ್ಕಾಗಿ ಅಲ್ಲಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ.





