ಐಪಿಎಲ್: ಲಕ್ನೊಗೆ ಶರಣಾದ ಪಂಜಾಬ್ ಕಿಂಗ್ಸ್
ಮೊಹ್ಸಿನ್ ಖಾನ್ ಮಾರಕ ಬೌಲಿಂಗ್, ಕೃನಾಲ್ ಪಾಂಡ್ಯ, ಚಾಮೀರಾಗೆ ತಲಾ 2 ವಿಕೆಟ್

Photo: twitter
ಪುಣೆ, ಎ.29:ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್(3-24), ದುಷ್ಮಂತ ಚಾಮೀರ(2-17) ಹಾಗೂ ಕೃನಾಲ್ ಪಾಂಡ್ಯ(2-11) ಅವರ ನಿಖರ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 42ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 20 ರನ್ಗಳ ಅಂತರದಿಂದ ಸೋಲುಂಡಿದೆ.
ಗೆಲ್ಲಲು 154 ರನ್ ಗುರಿ ಪಡೆದ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ಜಾನಿ ಬೈರ್ಸ್ಟೋವ್(32 ರನ್, 28 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಮಯಾಂಕ್ ಅಗರ್ವಾಲ್(25 ರನ್, 17 ಎಸೆತ), ಲಿವಿಂಗ್ಸ್ಟೋನ್(18 ರನ್)ಹಾಗೂ ರಿಷಿ ಧವನ್(ಔಟಾಗದೆ 21 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
9ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿ ಒಟ್ಟು 12 ಅಂಕ ಗಳಿಸಿದ ಲಕ್ನೊ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಪಂಜಾಬ್ 9ನೇ ಪಂದ್ಯದಲ್ಲಿ 5ನೇ ಸೋಲು ಕಂಡಿದೆ.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಲಕ್ನೊ ತಂಡ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(46 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ದೀಪಕ್ ಹೂಡಾ(34 ರನ್, 28 ಎಸೆತ, 1 ಬೌಂಡರಿ, 2 ಸಿಕ್ಸರ್) ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ಲಕ್ನೊ ತಂಡ 2.5ನೇ ಓವರ್ನಲ್ಲಿ 13 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಂಡಿತು. ಆಗ ದೀಪಕ್ ಹೂಡರೊಂದಿಗೆ 2ನೇ ವಿಕೆಟ್ಗೆ 85 ರನ್ ಜೊತೆಯಾಟ ನಡೆಸಿದ ಡಿಕಾಕ್ ತಂಡವನ್ನು ಆಧರಿಸಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ಲಕ್ನೊ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ದುಷ್ಮಂತ ಚಾಮೀರ(17 ರನ್), ಜೇಸನ್ ಹೋಲ್ಡರ್(11 ರನ್)ಹಾಗೂ ಮೊಹ್ಸಿನ್ ಖಾನ್(ಔಟಾಗದೆ 13)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ರಾಹುಲ್(6 ರನ್), ಆಲ್ರೌಂಡರ್ ಕೃನಾಲ್ ಪಾಂಡ್ಯ(7 ರನ್), ಮಾರ್ಕಸ್ ಸ್ಟೋನಿಸ್(1 ರನ್) ಹಾಗೂ ಆಯುಷ್ ಬದೋನಿ(4 ರನ್)ಒಂದಂಕಿಯ ಸ್ಕೋರ್ ಗಳಿಸಿ ನಿರಾಸೆಗೊಳಿಸಿದರು.







