ಭಾರತದ ಆಹಾರ ಭದ್ರತೆ ಕಾರ್ಯಕ್ರಮವು ದಲಿತರ ವಿರುದ್ಧ ತಾರತಮ್ಯ ಮಾಡುತ್ತಿದೆಯೇ?

ಹೆಚ್ಚಿನ ಪ್ರಕರಣಗಳಲ್ಲಿ, ಅರ್ಹತೆಯಿದ್ದರೂ ರೇಶನ್ ಕಾರ್ಡ್ ಕೊಡದಿರುವ ಮೂಲಕ ದಲಿತರ ವಿರುದ್ಧ ಸಾರಾಸಗಟು ತಾರತಮ್ಯ ಮಾಡಲಾಗುತ್ತಿದೆ. ಇತರ ಪ್ರಕರಣಗಳಲ್ಲಿ, ಕುಟುಂಬಗಳ ಒಪ್ಪಿಗೆಯಿಲ್ಲದೆಯೇ ರೇಶನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ, ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ತಮ್ಮ ಆಹಾರದ ಹಕ್ಕನ್ನು ಕೇಳಿದಾಗ ಅವರನ್ನು ಹೊಡೆಯಲಾಗುತ್ತದೆ ಮತ್ತು ನಿಂದಿಸಲಾಗುತ್ತದೆ.
ದೇವಂತಿ ದೇವಿ ಮತ್ತು ಸೋನಿ ದೇವಿ ಬಿಹಾರ ರಾಜ್ಯದ ಪೂರ್ವ ಭಾಗದ ಒಂದು ಜಿಲ್ಲೆಯವರು. ಇಬ್ಬರಿಗೂ 35ರ ಆಸುಪಾಸಿನ ವಯಸ್ಸು. ಅವರು ದಿಲ್ಲಿಯ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಗಂಡಂದಿರು ರಾಜಧಾನಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಾರೆ.
2004ರಲ್ಲಿ ಸೋನಿಗೆ ಮದುವೆಯಾದಾಗ ಅವರ ಹೆಸರನ್ನು ರೇಶನ್ ಕಾರ್ಡ್‌ಗೆ ಸೇರಿಸಲಾಯಿತು.
‘‘ಯಾವುದೇ ಸಮಸ್ಯೆ ಇರಲಿಲ್ಲ. ಯಾರೋ ಬಂದರು, ನಮ್ಮ ಅರ್ಜಿಗಳನ್ನು ತುಂಬಿದರು, ನಮ್ಮ ಕುಟುಂಬದ ಫೋಟೊ ತೆಗೆದರು. ಕೆಲವು ದಿನಗಳ ಬಳಿಕ, ರೇಶನ್ ಕಾರ್ಡ್‌ನಲ್ಲಿ ನನ್ನ ಗಂಡನ ಮನೆಯವರ ಜೊತೆಗೆ ನನ್ನ ಹೆಸರೂ ಸೇರ್ಪಡೆಗೊಂಡಿತು’’ ಎಂಬುದಾಗಿ ಸೋನಿ ‘ಅಲ್ ಜಝೀರ’ದೊಂದಿಗೆ ಮಾತನಾಡುತ್ತಾ ಹೇಳಿದರು.
ಕಳೆದ ವರ್ಷ, ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಸರಕಾರದ ‘ಒಂದು ದೇಶ, ಒಂದು ರೇಶನ್ ಕಾರ್ಡ್’ ಯೋಜನೆಯ ಅಡಿಯಲ್ಲಿ ಸೋನಿ ಹೊಸದಿಲ್ಲಿಯಲ್ಲಿ ಕೆಲವು ತಿಂಗಳು ರಿಯಾಯಿತಿ ದರದಲ್ಲಿ ಆಹಾರ ಧಾನ್ಯವನ್ನೂ ಪಡೆದರು.
ಸೋನಿಯಂತೆಯೇ, ದೇವಂತಿ ಕೂಡ ತನ್ನ ಗಂಡನ ಮನೆಯವರ ರೇಶನ್ ಕಾರ್ಡ್‌ಗೆ ಸೇರ್ಪಡೆಗೊಂಡರು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರ ಕುಟುಂಬ ಸದಸ್ಯರ ಹೆಸರುಗಳನ್ನು ರೇಶನ್ ಕಾರ್ಡ್‌ನಿಂದ ತೆಗೆದು ಹಾಕಲಾಯಿತು.
‘‘ನನ್ನ ಎರಡನೇ ಮಗುವಿಗೆ ಎರಡು ವರ್ಷವಾಗಿದ್ದಾಗ, ಒಬ್ಬ ಅಧಿಕಾರಿ ನಮ್ಮ ಮನೆಗೆ ಬಂದು, ಎಷ್ಟು ಮಂದಿ ಇಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು. ‘ನಿಮ್ಮಂಥ ಜನರು’ ಒಂದು ಕುಟುಂಬದ ಹೆಸರಿನಲ್ಲಿ ಎಲ್ಲ ರೇಶನ್ ಪಡೆದುಕೊಳ್ಳುತ್ತೀರಿ ಎಂದು ಹೇಳಿದರು’’ ಎಂಬುದಾಗಿ ಅವರು ಅಲ್ ಜಝೀರಕ್ಕೆ ಹೇಳಿದರು.
‘‘ಈ ನಿಂದನೆಯ ಮೂಲಕ ಅವರು ಏನು ಹೇಳಿದರು ಎನ್ನುವುದು ನನಗೆ ಅರ್ಥವಾಗಲಿಲ್ಲ. ಒಂದು ತಿಂಗಳ ಬಳಿಕ, ನಾನು ನ್ಯಾಯ ಬೆಲೆ ಅಂಗಡಿಗೆ ಹೋದಾಗ, ನಮ್ಮ ಇಡೀ ಕುಟುಂಬದ ಹೆಸರನ್ನು ದಾಖಲೆಯಿಂದ ಕೆಂಪು ಶಾಯಿಯಲ್ಲಿಂದ ಹೊಡೆದು ಹಾಕಲಾಗಿತ್ತು. ನಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂಬುದಾಗಿ ಅಂಗಡಿಯವನು ಹೇಳಿದನು’’.
ಸೋನಿ ತನ್ನನ್ನು ವರ್ಮ ಎಂಬ ಉಪನಾಮದಿಂದ ಗುರುತಿಸಿಕೊಳ್ಳುತ್ತಾರೆ. ವರ್ಮ ಎನ್ನುವುದು ಹಿಂದೂಗಳಲ್ಲಿ ಮೇಲ್ವರ್ಗದ ಜಾತಿಗೆ ಸೇರಿದ ಜನರು ಬಳಸುವ ಉಪನಾಮ. ದೇವಂತಿ ದಲಿತೆಯಾಗಿದ್ದಾರೆ.
ಭಾರತೀಯ ದಲಿತರ ಆಹಾರ ಭದ್ರತೆ
ಇಬ್ಬರೂ ಮಹಿಳೆಯರು ಒಂದೇ ಆದಾಯ ವರ್ಗಕ್ಕೆ ಸೇರಿದವರು. ಆದರೆ ಸೋನಿ ಸಿಮೆಂಟ್ ಮನೆಯೊಂದರಲ್ಲಿ ವಾಸಿಸುತ್ತಾರೆ. ಅವರ ಮನೆಯಲ್ಲಿ ಹಳೆಯ ಫ್ರಿಜ್, ಒಂದು ಏರ್ ಕೂಲರ್ ಮತ್ತು ಒಂದು ಟಿವಿ ಇದೆ. ಆದರೆ ವಾಲ್ಮೀಕಿ ದಲಿತ ಸಮುದಾಯಕ್ಕೆ ಸೇರಿದ ದೇವಂತಿ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ ಹಾಗೂ ಅವರ ಮನೆಯಲ್ಲಿ ಕೆಲವು ಪಾತ್ರೆಗಳಷ್ಟೇ ಇವೆ.
‘‘ರೇಶನ್ ಕಾರ್ಡೊಂದನ್ನು ಮಾಡಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಿದೆವು. ಪ್ರತಿ ಬಾರಿ ನಾವು ಅಧಿಕಾರಿಗಳನ್ನು ಭೇಟಿಯಾದಾಗ, 300 ರೂಪಾಯಿಯಿಂದ 600 ರೂಪಾಯಿವರೆಗೆ ಲಂಚ ಕೊಡುವಂತೆ ನಮ್ಮನ್ನು ಕೇಳಲಾಯಿತು. ಅದು ನಮಗೆ ದೊಡ್ಡ ಮೊತ್ತವಾಗಿದೆ’’ ಎಂದು ದೇವಂತಿ ಹೇಳಿದರು.
‘‘ಹಾಗಾಗಿ, ಇಂದಿನವರೆಗೂ ನಮಗೆ ರೇಶನ್ ಕಾರ್ಡ್ ಇಲ್ಲ. ಬರೀ ಲಂಚ ಕೊಟ್ಟರಷ್ಟೇ ರೇಶನ್ ಕಾರ್ಡ್ ಆಗುವುದಿಲ್ಲ. ನಮ್ಮ ಜಾತಿಯ ಯಾರಾದರೂ ಅಧಿಕಾರಿಯ ಪರಿಚಯವಿದ್ದರೆ ಮಾತ್ರ ಅದು ಆಗುತ್ತದೆ’’ ಎಂದರು.
‘ಜಾತಿಯ ಬಗ್ಗೆ ಪೂರ್ವಾಗ್ರಹ ಪೀಡಿತ ಭಾವನೆಯಿದೆ’
ಭಾರತದ ಬೃಹತ್ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಇಂಥ ಹಲವಾರು ಉದಾಹರಣೆಗಳಿವೆ.
ಹೆಚ್ಚಿನ ಪ್ರಕರಣಗಳಲ್ಲಿ, ಅರ್ಹತೆಯಿದ್ದರೂ ರೇಶನ್ ಕಾರ್ಡ್ ಕೊಡದಿರುವ ಮೂಲಕ ದಲಿತರ ವಿರುದ್ಧ ಸಾರಾಸಗಟು ತಾರತಮ್ಯ ಮಾಡಲಾಗುತ್ತಿದೆ. ಇತರ ಪ್ರಕರಣಗಳಲ್ಲಿ, ಕುಟುಂಬಗಳ ಒಪ್ಪಿಗೆಯಿಲ್ಲದೆಯೇ ರೇಶನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ, ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ತಮ್ಮ ಆಹಾರದ ಹಕ್ಕನ್ನು ಕೇಳಿದಾಗ ಅವರನ್ನು ಹೊಡೆಯಲಾಗುತ್ತದೆ ಮತ್ತು ನಿಂದಿಸಲಾಗುತ್ತದೆ.
2020ರಲ್ಲಿ, ಉತ್ತರಪ್ರದೇಶ ರಾಜ್ಯದ ಆಗ್ರಾ ಜಿಲ್ಲೆಯಲ್ಲಿ ಐದು ವರ್ಷದ ದಲಿತ ಮಗು ಸೋನಿಯಾ ಕುಮಾರಿ ಹಸಿವಿನಿಂದಾಗಿ ಮೃತಪಟ್ಟಿತು. ಆಗ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು.
ಮಗು ಸೋನಿಯಾಳ ಗ್ರಾಮದ ಇತರ 2,000 ದಲಿತ ಕುಟುಂಬಗಳಿಗೂ ರೇಶನ್ ಕಾರ್ಡ್ ಕೊಟ್ಟಿರಲಿಲ್ಲ ಎನ್ನುವುದು ಬಳಿಕ ಪತ್ತೆಯಾಯಿತು. ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಆ ಕುಟುಂಬಗಳು ಭಾರೀ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದವು.
ಸೋನಿಯಾ ಮೃತಪಟ್ಟ ದಿನಗಳ ಬಳಿಕ, ಅವರ ಕುಟುಂಬಕ್ಕೆ ಭಾರತೀಯ ಜನತಾ ಪಕ್ಷದ ಸರಕಾರವು ರೇಶನ್ ಕಾರ್ಡೊಂದನ್ನು ನೀಡಿತು.
ನಗರ ಪ್ರದೇಶಗಳಲ್ಲಿ, ನೈರ್ಮಲ್ಯ ಕೆಲಸ ಮತ್ತು ಚಿಂದಿ ಆಯುವ ಕೆಲಸಗಳನ್ನು ಹೆಚ್ಚಾಗಿ ದಲಿತರೇ ಮಾಡುತ್ತಿದ್ದಾರೆ. ಈ ಕಾರ್ಮಿಕರ ಪೈಕಿ 33 ಶೇಕಡಾ ಮಂದಿ ರೇಶನ್ ಕಾರ್ಡ್‌ಗಳನ್ನೇ ಹೊಂದಿಲ್ಲ ಎಂದು ದಲಿತ ಬಹುಜನ ರಿಸೋರ್ಸ್ ಸೆಂಟರ್ ಹೇಳಿದೆ.
‘‘ಭಾರತದಲ್ಲಿ ಜಾತಿ ವ್ಯವಸ್ಥೆಯ ತಳಹದಿಯನ್ನು ಕಟ್ಟುನಿಟ್ಟಿನ ವಂಶಪಾರಂಪರ್ಯ ವೃತ್ತಿ ಬಲಪಡಿಸುತ್ತದೆ’’ ಎಂದು ರಾಷ್ಟ್ರೀಯ ಲೋಕ ದಳ ಪಕ್ಷದ ದಲಿತ ಮತ್ತು ಬುಡಕಟ್ಟು ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಕನೋಜಿಯ ಹೇಳುತ್ತಾರೆ.
‘‘ಚಿಂದಿ ಆಯುವವರು, ಸ್ಮಶಾನ ಕೆಲಸಗಾರರು ಮತ್ತು ರಸ್ತೆ ಬದಿಯಲ್ಲಿ ವಾಸಿಸುವವರು ಯಾರು? ಅವರಲ್ಲಿ ಹೆಚ್ಚಿನವರು ದಲಿತರು’’ ಎಂದು ಅಲ್ ಜಝೀರದೊಂದಿಗೆ ಮಾತನಾಡಿದ ಅವರು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿ ನರೇಂದ್ರ ಮೋದಿ ಸರಕಾರವು ಜಾತಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆ ಮೂಲಕ ಸರಕಾರವು ದಲಿತ ಮತ್ತು ಇತರ ಶೋಷಿತ ವರ್ಗಗಳ ಬೇಡಿಕೆಗಳನ್ನು ನಿರ್ಲಕ್ಷಿಸಿದೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯೆಗಳನ್ನು ಕೋರಿ ‘ಅಲ್ ಜಝೀರ’ವು ಆಹಾರ ಸಚಿವಾಲಯದ ಅಧಿಕಾರಿಗಳು ಮತ್ತು ಹಲವಾರು ಬಿಜೆಪಿ ವಕ್ತಾರರನ್ನು ಸಂಪರ್ಕಿಸಿತು. ಆದರೆ, ಅವರು ಈ ವಿಷಯದಲ್ಲಿ ಪ್ರತಿಕ್ರಿಯೆಗಳನ್ನು ನೀಡಲು ನಿರಾಕರಿಸಿದರು.
2013ರಲ್ಲಿ ಅಂಗೀಕಾರಗೊಂಡ ಭಾರತದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯು ಸರಕಾರದ ಆಹಾರದ ಹಕ್ಕು ಯೋಜನೆಗೆ ಕಾನೂನು ಮಾನ್ಯತೆಯನ್ನು ನೀಡುತ್ತದೆ. ಈ ಕಾನೂನು ಕಾಗದದಲ್ಲಿ, ಪ್ರತಿಯೊಬ್ಬ ನಾಗರಿಕನಿಗೂ ಆಹಾರವನ್ನು ಖಾತರಿಪಡಿಸುತ್ತದೆ. ಆದರೆ, ರೇಶನ್ ಆಹಾರ ಧಾನ್ಯಗಳನ್ನು ಪಡೆಯಲು ಎಲ್ಲರೂ ಅರ್ಹರಲ್ಲ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಬಡತನ ಸೂಚ್ಯಂಕಗಳ ಆಧಾರದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಅದು ಜಾತಿಯನ್ನು ಬಡತನ ಸೂಚ್ಯಂಕವಾಗಿ ಪರಿಗಣಿಸುವುದಿಲ್ಲವಾದರೂ, ಪ್ರತಿ ಮೂವರು ದಲಿತರಲ್ಲಿ ಓರ್ವ ಬಡವ ಎಂಬುದಾಗಿ 2018ರಲ್ಲಿ ಬಿಡುಗಡೆಗೊಂಡ ವಿಶ್ವಸಂಸ್ಥೆಯ ಬಡತನ ಸೂಚ್ಯಂಕವು ಹೇಳುತ್ತದೆ.
2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯ ಕೇವಲ ಮೂರನೇ ಎರಡು ಭಾಗ ಜನರಲ್ಲಿ ರೇಶನ್ ಕಾರ್ಡ್‌ಗಳಿವೆ. ಅದರ ಫಲಾನುಭವಿಗಳನ್ನು ಆಯ್ಕೆ ಮಾಡುವ ಮಾನದಂಡಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ.
ಇಂಥ ಪರಿಸ್ಥಿತಿಯಲ್ಲಿ, ಈ ಯೋಜನೆಯ ಪ್ರಯೋಜನಗಳನ್ನು ಯಾರು ಪಡೆಯುತ್ತಾರೆ ಎನ್ನುವುದು ಹೆಚ್ಚಿನ ಸಂದರ್ಭಗಳಲ್ಲಿ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿ ಹೊಂದಿರುವ ಸ್ಥಳೀಯ ಅಧಿಕಾರಿಗಳನ್ನು ಅವಲಂಬಿಸುತ್ತದೆ.
ಇಲ್ಲಿ ಜಾತಿ ವ್ಯವಸ್ಥೆಯು ಆಟ ಆಡುತ್ತದೆ ಹಾಗೂ ತಾರತಮ್ಯಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಹೇಳುತ್ತಾರೆ.
‘‘ಫಲಾನುಭವಿಗಳನ್ನು ಗುರುತಿಸುವ ವಿಧಾನವೇ ಜಾತಿ ಆಧಾರಿತ ತಾರತಮ್ಯಕ್ಕೆ ಅವಕಾಶ ಮಾಡಿಕೊಡುತ್ತದೆ’’ ಎಂದು ಹೊಸದಿಲ್ಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರವನ್ನು ಕಲಿಸುವ ದೀಪಾ ಸಿನ್ಹಾ ಹೇಳುತ್ತಾರೆ.
ಸರಕಾರದಲ್ಲಿ ‘ಸರ್ವೇ ಸಾಮಾನ್ಯವಾಗಿರುವ ಅದಕ್ಷತೆಗಳಿವೆ’ ಹಾಗೂ ಅದನ್ನು ಪ್ರತಿಯೊಬ್ಬ ಬಡವ ಎದುರಿಸಬೇಕಾಗಿದೆ ಎಂದು ಜಾತಿ ವಿಷಯದಲ್ಲಿ ವ್ಯಾಪಕ ಕೆಲಸ ಮಾಡಿರುವ ಅರ್ಥಶಾಸ್ತ್ರಜ್ಞ ಸುಖ್‌ದೇವ್ ತೋರಟ್ ಹೇಳುತ್ತಾರೆ
‘‘ಉದಾಹರಣೆಗೆ; ಭ್ರಷ್ಟಾಚಾರ. ಆದರೆ, ಸಾಮಾನ್ಯ ಅದಕ್ಷತೆಗಳನ್ನೂ ಮೀರಿ ಜಾತಿ ಪೂರ್ವಾಗ್ರಹಗಳಿವೆ. ಈ ಜಾತಿ ಪೂರ್ವಾಗ್ರಹಗಳನ್ನು ಪ್ರತಿಯೊಬ್ಬ ಬಡವ ಎದುರಿಸುವುದಿಲ್ಲ. ಈ ಪೂರ್ವಾಗ್ರಹಗಳು ಧೋರಣೆ ಮತ್ತು ವರ್ತನೆಯಲ್ಲಿ ಗೋಚರಿಸುತ್ತವೆ. ಆದರೆ ಅವುಗಳು ದಾಖಲೆಗೆ ಸಿಗುವುದಿಲ್ಲ. ಹಾಗಾಗಿ, ದೇವಂತಿ ಈಗಲೂ ರೇಶನ್ ಕಾರ್ಡ್‌ಗಾಗಿ ಪರದಾಡುತ್ತಿದ್ದಾರೆ ಮತ್ತು ಸೋನಿ ದೇವಿ ರೇಶನ್ ಕಾರ್ಡ್ ಹೊಂದಿದ್ದಾರೆ’’ ಎಂದು ಅಲ್ ಜಝೀರದೊಂದಿಗೆ ಮಾತನಾಡಿದ ತೋರಟ್ ಹೇಳಿದರು.
‘ನಾನು ಸಾಲಿನಲ್ಲಿ ಯಾವಾಗಲೂ ಕೊನೆಯಲ್ಲಿ’
ಆಧಾರ್ ಕಾರ್ಡ್‌ನ ಪ್ರಕಾರ, ಹೊಸದಿಲ್ಲಿಯಲ್ಲಿ ವಾಸಿಸುತ್ತಿರುವ ರಾಣಿ ದೇವಿಗೆ 64 ವರ್ಷ. ಆಧಾರ್ ಕಾರ್ಡ್ ಅವರು ಹೊಂದಿರುವ ಏಕೈಕ ಗುರುತು ಚೀಟಿಯಾಗಿದೆ. ಆದರೆ, ಅವರ ಸುಕ್ಕುಗಟ್ಟಿದ ಮುಖ, ಬಾಗಿದ ಬೆನ್ನು ಮತ್ತು ಮಂದ ದೃಷ್ಟಿಯು ಅವರಿಗೆ ಹೆಚ್ಚು ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತದೆ.
ಸುಮಾರು ಆರು ವರ್ಷಗಳ ಹಿಂದೆ, ರಾಣಿಯ ಮಗ ವಿಷಪೂರಿತ ಶರಾಬು ಸೇವಿಸಿ ಮೃತಪಟ್ಟರು. ಅವರ ಸೊಸೆ ತನ್ನ ಮೂವರು ಮಕ್ಕಳನ್ನು ರಾಣಿಯ ಬಳಿ ಬಿಟ್ಟು ಹೋದವರು ಮತ್ತೆಂದೂ ಮರಳಲಿಲ್ಲ. ಮೂರು ವರ್ಷಗಳ ಬಳಿಕ ರಾಣಿ ತನ್ನ ಗಂಡನನ್ನೂ ಕಳೆದುಕೊಂಡರು. ಈಗ ವಿಧವೆಯಾಗಿರುವ ಅವರು ತನ್ನ ಮೊಮ್ಮಕ್ಕಳನ್ನೂ ಸಾಕಬೇಕಾಗಿದೆ. ಆದರೆ ಯಾವುದೇ ಆದಾಯ ಮೂಲವಿಲ್ಲ.
ರಾಣಿಯ ಬದುಕಿನಲ್ಲಿ ಬಡತನವೊಂದೇ ಸಂಕಷ್ಟವಲ್ಲ. ಅವರು ವಾಲ್ಮೀಕಿ ದಲಿತೆ ಕೂಡ.
ಎನ್‌ಎಫ್‌ಎಸ್‌ಎಯ ನಿಯಮಗಳ ಪ್ರಕಾರ, ರಾಣಿ ಭಾರತೀಯ ನಾಗರಿಕರ ‘‘ಬಡವರಲ್ಲಿ ಬಡವ’’ ವರ್ಗಕ್ಕೆ ಸೇರಿದ್ದಾರೆ. ಹಾಗಾಗಿ, ಆಹಾರ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ. ಅವರು ವಿಧವಾ ಅಥವಾ ವೃದ್ಧಾಪ್ಯ ವೇತನಕ್ಕೂ ಅರ್ಹರಾಗಿದ್ದಾರೆ. ಅವರ ಮೊಮ್ಮಕ್ಕಳು ಶಾಲೆಯಲ್ಲಿ ಉಚಿತ ಊಟ ಪಡೆಯುವ ಅರ್ಹತೆ ಹೊಂದಿದ್ದಾರೆ.
ಆದರೆ, ಇವೆಲ್ಲವೂ ಕಾಗದಗಳಲ್ಲಿ ಮಾತ್ರ ಇವೆ. ರಾಣಿಯಾಗಲಿ, ಅವರ ಮೊಮ್ಮಕ್ಕಳಾಗಲಿ ಮೇಲೆ ನಮೂದಿಸಿದ ಯಾವುದೇ ಸರಕಾರಿ ಯೋಜನೆಗಳ ಲಾಭವನ್ನು ಪಡೆದಿಲ್ಲ.
‘‘ರೇಶನ್ ಕಾರ್ಡ್‌ಗಾಗಿ ನಾವು ಎಷ್ಟು ಸಲ ಅರ್ಜಿ ಹಾಕುವುದು? ನಾನು ತುಂಬಾ ಸಲ ಅರ್ಜಿಗಳನ್ನು ತುಂಬಿಸಿದೆ. ಆದರೆ, ಏನಾದರೂ ಆಯಿತಾ? ನಾನು ಯಾರೆಂದು ಅಧಿಕಾರಿಗಳಿಗೆ ಗೊತ್ತಾದರೆ ನನ್ನನ್ನು ಸಾಲಿನ ಕೊನೆಯಲ್ಲಿ ನಿಲ್ಲಿಸುತ್ತಾರೆ’’ ಎಂದು ರಾಣಿಯ 16 ವರ್ಷದ ಮೊಮ್ಮಗ ಕುನಾಲ್ ಕೋಪದಿಂದ ಹೇಳುತ್ತಾರೆ.
‘‘ಅಲ್ಲಿ ನನ್ನ ಜಾತಿಗೆ ಸೇರಿದವರು ಯಾರೂ ಇಲ್ಲ. ಮೇಲ್ಜಾತಿಯ ಕುಟುಂಬವೊಂದು ಇಂಥ ಸಂಕಟವನ್ನು ಅನುಭವಿಸಲು ಸಾಧ್ಯವೇ ಎನ್ನುವುದನ್ನು ನೀವೊಮ್ಮೆ ಊಹಿಸಿ’’ ಎಂದು ಅವರು ಹೇಳುತ್ತಾರೆ.
‘‘ಜಾತಿಯ ಕಾರಣದಿಂದಾಗಿ ರಾಣಿ ಮತ್ತು ಅವರ ಮೊಮ್ಮಕ್ಕಳಿಗೆ ರೇಶನ್ ಕಾರ್ಡ್ ಸಿಗುತ್ತಿಲ್ಲ ಎಂದು ನ್ಯಾಶನಲ್ ಕ್ಯಾಂಪೇನ್ ಫಾರ್ ದಲಿತ್ ಹ್ಯೂಮನ್ ರೈಟ್ಸ್ (ಎನ್‌ಸಿಡಿಎಚ್‌ಆರ್)ನ ಬೀನಾ ಪಲ್ಲಿಕಲ್ ಹೇಳುತ್ತಾರೆ.
‘‘ರಾಣಿಗೆ ರೇಶನ್ ಕಾರ್ಡ್ ಅಗತ್ಯವಿಲ್ಲ ಅಥವಾ ಅವರು ಅದನ್ನು ಬಯಸುತ್ತಿಲ್ಲ ಎಂದಲ್ಲ. ದಲಿತ ವಿಧವೆಯೊಬ್ಬರು ತನ್ನ ಕಾನೂನುಬದ್ಧ ಹಕ್ಕನ್ನು ಪಡೆಯುವುದನ್ನು ವ್ಯವಸ್ಥೆಯು ಅತ್ಯಂತ ಕಠಿಣಗೊಳಿಸಿದೆ’’ ಎಂದರು.
ಹಸಿವೆಯು ರಾಣಿ ಮತ್ತು ಅವರ ಮೊಮ್ಮಕ್ಕಳನ್ನು ಇನ್ನಿಲ್ಲದಂತೆ ಕಾಡಿದೆ. ಅವರು ಕೆಲಸ ಮಾಡಲು ತೀರಾ ದುರ್ಬಲರಾಗಿರುವುದರಿಂದ ಕುನಾಲ್ 13ನೇ ವಯಸ್ಸಿನಲ್ಲೇ ಬಾಲ ಕಾರ್ಮಿಕನಾಗಿ ಕೆಲಸ ಮಾಡಬೇಕಾಯಿತು. 2020ರಲ್ಲಿ ರಾಣಿಯ ಹಿರಿಯ ಮೊಮ್ಮಗಳು ಕೋಮಲ್‌ರನ್ನು 16ನೇ ವರ್ಷದಲ್ಲೇ ಮದುವೆ ಮಾಡಿಕೊಡಲಾಯಿತು.







