ತೊಕ್ಕೊಟ್ಟು | ಮಸೀದಿಗೆ ನುಗ್ಗಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ಆರೋಪಿ ಯುವಕನ ಬಂಧನ

ಬಂಧಿತ ಆರೋಪಿ ಸುಜೀತ್ ಶೆಟ್ಟಿ
ಮಂಗಳೂರು, ಎ.30: ತೊಕ್ಕೊಟ್ಟಿನ ಮಸೀದಿಯೊಂದರ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳದ ನಿಟ್ಟೆ ನಿವಾಸಿ ಸುಜೀತ್ ಶೆಟ್ಟಿ(26) ಬಂಧಿತ ಆರೋಪಿ.
ತೊಕ್ಕೊಟ್ಟುವಿನ ಹುದಾ ಜುಮಾ ಮಸೀದಿಯಲ್ಲಿ ಎ.28ರಂದು ರಾತ್ರಿ ರಮಝಾನ್ ಪ್ರಯುಕ್ತ 'ಲೈಲತುಲ್ ಖದರ್' ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು, ಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎ.29ರಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಮಸೀದಿಯ ಮಹಿಳೆಯರು ನಮಾಝ್ ಮಾಡುವ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಯುವಕನೋರ್ವ ಅಸಭ್ಯವಾಗಿ, ಅಶ್ಲೀಲವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.