ಉಚಿತ ಸೇವೆಯ ಆಕ್ಸೆಸ್ಲೈಫ್ ಮಾಹೆ ಮಣಿಪಾಲ ಕೇಂದ್ರ ಉದ್ಘಾಟನೆ

ಮಣಿಪಾಲ : ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಸಹಯೋಗ ದೊಂದಿಗೆ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್ ‘ಆಕ್ಸೆಸ್ಲೈಫ್ ಮಾಹೆ ಮಣಿಪಾಲ’ ಕೇಂದ್ರ ಇಂದು ಉದ್ಘಾಟನೆಗೊಂಡಿತು.
ಮಣಿಪಾಲದ ಮಾಧವನಗರದ ಎನರ್ಜಿ ಸೆಲ್ ಎದುರು ಬಿಕ್ಯೂ ರಸ್ತೆ ಬಳಿ ಕಾರ್ಯಾಚರಿಸುವ ಈ ಕೇಂದ್ರವನ್ನು ಉದ್ಘಾಟಿಸಿದ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ಡಾ.ರಂಜನ್ ಆರ್.ಪೈ ಮಾತನಾಡಿ, ಈ ಕೇಂದ್ರವು ಕರ್ನಾಟಕದ ಮೊದಲ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್ ಪರಿಕಲ್ಪನೆ ಯಾಗಿದೆ. ಇದು ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯು ನಡೆಯುತ್ತಿರುವಾಗ ಸಮಗ್ರ ಆರೈಕೆಯನ್ನು ಒದಗಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಆಕ್ಸೆಸ್ಲೈಫ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಗಿರೀಶ್ ನಾಯರ್, ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಂಕೀತ್ ದೇವ್, ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ.ವೆಂಕಟೇಶ್ ಅತಿಥಿಗಳಾಗಿದ್ದರು.





