ಭಾರತದ ಇಬ್ಬರು ಪ್ರಮುಖ ಅತ್ಲೀಟ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ, ನಿಷೇಧ ಎದುರಿಸುವ ಭೀತಿ

ಹೊಸದಿಲ್ಲಿ,. ಎ.30: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಓರ್ವ ಪುರುಷ ಹಾಗೂ ಮಹಿಳಾ ಟ್ರಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಡೋಪಿಂಗ್ ಪರೀಕ್ಷೆಯಲ್ಲಿ ನಿಷೇಧಿತ ಅನಾಬೊಲಿಕ್ ಸ್ಟಿರಾಯ್ಡಿ ಸೇವಿಸಿರುವುದು ದೃಢಪಟ್ಟಿದ್ದು, ಅವರು ನಾಲ್ಕು ವರ್ಷಗಳ ತನಕ ನಿಷೇಧವನ್ನು ಎದುರಿಸುತ್ತಿದ್ದಾರೆ. ಇದರೊಂದಿಗೆ ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧದ ಭಾರತದ ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಭಾರತದ ಅತ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ)ಈ ಪ್ರಕರಣದ ಬಗ್ಗೆ ತುಟಿಬಿಚ್ಚಿಲ್ಲ. ಇಬ್ಬರು ಪ್ರಮುಖ ಕ್ರೀಡಾಪಟುಗಳನ್ನು ರಾಷ್ಟ್ರೀಯ ಶಿಬಿರದಿಂದ ಕೈಬಿಡಲಾಗಿದೆ ಎಂದು ಮೂಲಗಳು ದೃಢಪಡಿಸಿವೆ.
ಇಬ್ಬರು ಟ್ರಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್‌ಗಳು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಅವರು ಇನ್ನು ಮುಂದೆ ರಾಷ್ಟ್ರೀಯ ಶಿಬಿರದ ಭಾಗವಾಗಿರುವುದಿಲ್ಲ ಎಂದು ರಾಷ್ಟ್ರೀಯ ತರಬೇತುದಾರರೊಬ್ಬರು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
2021ರಲ್ಲಿ ಬಿಡುಗಡೆಯಾದ ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯ(ವಾಡಾ) ಹೊಸ ವರದಿಯ ಪ್ರಕಾರ ಡೋಪಿಂಗ್ ಪ್ರಕರಣದಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. 152 ಪ್ರಕರಣಗಳೊಂದಿಗೆ ಭಾರತವು ಪಟ್ಟಿಯಲ್ಲಿ ರಶ್ಯ(167) ಹಾಗೂ ಇಟಲಿ(157)ಗಿಂತ ಸ್ವಲ್ಪ ಹಿಂದಿದೆ.







