ಮಂಗಳೂರು; ಕೊಲೆಯತ್ನ ಪ್ರಕರಣ : ಆರೋಪಿಗಳ ಖುಲಾಸೆ
ಮಂಗಳೂರು : ಆರು ವರ್ಷದ ಹಿಂದೆ ಕೌಡೂರು ಕಟ್ಟೆ ಬಳಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
೨೦೧೬ರ ಜು.೧೭ರಂದು ಸಂಜೆ ವಾಮನ ಪೂಜಾರಿ ಎಂಬವರಿಗೆ ಕ್ಷುಲ್ಲಕ ಕಾರಣಕ್ಕೆ ದಿವ್ಯರಾಜ್ ಶೆಟ್ಟಿ, ಹೇಮಂತ್ ಶೆಟ್ಟಿ, ಚಂದ್ರಹಾಸ್ ಅಮೀನ್, ಗಂಗಾಧರ, ಸುಭಾಶ್ ಶೆಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡ ವಾಮನ ಪೂಜಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ದಿವ್ಯರಾಜ್ ಶೆಟ್ಟಿ ಮತ್ತು ಇತರರ ವಿರುದ್ಧ ‘ಕೊಲೆಯತ್ನ’ ಆರೋಪ ಹೊರಿಸಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ವಿಚಾರಣೆ ನಡೆಸಿ ಸಾಕ್ಷ್ಯಗಳು ಒಂದಕ್ಕೊಂದು ಹೋಲಿಕೆಯಿಲ್ಲ ಎಂದು ಪರಿಗಣಿಸಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಎಂ.ಪಿ. ಶೆಣೈ ಹಾಗೂ ಮಯೂರ ಕೀರ್ತಿ ವಾದ ಮಂಡಿಸಿದ್ದರು.





