ದಲಿತ ಹೋರಾಟಗಾರ ಹಾರೋಹಳ್ಳಿ ರವೀಂದ್ರಗೆ ಜಾಮೀನು

ಮೈಸೂರು,ಎ.30: ದಲಿತ ಹೋರಾಟಗಾರ ಹಾಗೂ ಬರಹಗಾರ ಹಾರೋಹಳ್ಳಿ ರವೀಂದ್ರ ಅವರಿಗೆ ಬೆಳಗಾವಿ ಚಿಲ್ಲೆಯ ಕಾಗವಾಡ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದರು ಎಂಬ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಹಿನ್ನಲೆಯಲ್ಲಿ ಅವರನ್ನು ಎಪ್ರಿಲ್ 29ರ ಶುಕ್ರವಾರ ಅವರ ನಿವಾಸ ಮೈಸೂರಿನ ವರುಣಾ ಬಳಿಯ ಹಾರೋಹಳ್ಳಿಯಲ್ಲಿ ಬೆಳಗಾವಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು.
ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ರವೀಂದ್ರ ಅವರ ಪರ ವಕೀಲ ಶಂಕರ್ ಲೈನದಾರ ನನ್ನ ಕಕ್ಷಿದಾರರಿಗೆ ಪೊಲೀಸರು ಲಿಖಿತವಾಗಿ ಯಾವುದೇ ಸಮನ್ಸ್ ಆಗಲಿ ವಾರೆಂಟ್ ಆಗಲಿ ನೀಡಿಲ್ಲ. ಏಕಾಏಕಿ ಅವರನ್ನು ಬಂಧಿಸಿದ್ದಾರೆ. ಇದರಿಂದ ಅವರ ಮೇಲೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದರು.
ಇದರನ್ನು ಪುರಸ್ಕರಿಸಿದ ನ್ಯಾಯಾಧೀಶರು ತಕ್ಷಣ ಹಾರೋಹಳ್ಳಿ ರವೀಂದ್ರ ಅವರಿಗೆ ಜಾಮೀನು ಮಂಜೂರು ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಬೇಕು ಮತ್ತು ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ಸ್ಪಂಧಿಸಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಿದ್ದಾರೆ ಎಂದು ಹಾರೋಹಳ್ಳೀ ರವೀಂದ್ರ ಅವರ ಪರ ವಕೀಲ ಶಂಕರ್ ಲೈನದಾರ ತಿಳಿಸಿದರು.
ಬರಹಗಾರ ಹಾರೋಹಳ್ಳಿ ರವೀಂದ್ರ ಸಾಮಾಜಿಕ ಜಾಲತಾಣದಲ್ಲಿ 2017 ರಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿತ್ತು. 2020 ರಲ್ಲಿ ಅವರ ಮೇಲೆ ಚಾರ್ಜ್ ಶೀಟ್‍ಅನ್ನು ಹಾಕಲಾಗಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಜಾರಿಯಾದ ಹಿನ್ನಲೆಯಲ್ಲಿ ಅವರನ್ನು ಎಪ್ರಿಲ್ 29 ರ ಶುಕ್ರವಾರ ಬಂಧಿಸಲಾಗಿತ್ತು. ಆದರೆ ರವೀಂದ್ರ ಅವರಿಗೆ ಇದೂವರೆಗೂ ಯಾವುದೇ ಲಿಖಿತ ಸಮನ್ಸ್ ಆಗಲಿ ವಾರೆಂಟ್ ಆಗಲಿ ಜಾರಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.
ನನ್ನ ಬಂಧನದಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ: ನಾನು ಸತ್ಯದ ಪರ ಸದಾ ಹೋರಾಟ ಮಾಡುತ್ತೇನೆ. ನನ್ನನ್ನು ಷಡ್ಯತ್ರರದಿಂದ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಧೃತಿ ಗೆಡುವ ಪ್ರಶ್ನೆಯೇ ಇಲ್ಲ, ನಾನು ಓರ್ವ ದಲಿತ ಎಂಬ ಕಾರಣಕ್ಕೆ ನನ್ನನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ನನ್ನ ಹೋರಾಟ ಮತ್ತು ಬರವಣಿಗೆಯನ್ನು ಮುಂದುವರೆಸುತ್ತೇನೆ ಎಂದು “ವಾರ್ತಾಭಾರತಿ” ಗೆ ದೂರವಾಣಿ ಮೂಲಕ ಮಾತನಾಡಿ ತಿಳಿಸಿದರು.
ನನ್ನ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿದ ಮೇಲೆ ಒಮ್ಮೆಯಾದರೂ ಪೊಲೀಸರು ವಿಚಾರಣೆಗೆ ನನ್ನನ್ನು ಕರೆಸಬೇಕಿತ್ತು. ಆದರೆ ಅದ್ಯಾವುದನ್ನು ಮಾಡದೆ ಚಾರ್ಚ್ ಶೀಟ್ ಮಾಡಿದ್ದಾರೆ. ಇದರಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ವಾರೆಂಟ್ ಜಾರಿಯಾಗಿದೆ. ನನಗೆ ಇದೂ ವರೆಗೂ ಲಿಖಿತವಾಗಿ ಯಾವುದೇ ಸಮನ್ಸ್ ಆಗಲಿ ವಾರೆಂಟ್ ಆಗಲಿ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ನನ್ನನ್ನು ಬಂಧಿಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ದಲಿತರು ಅಲ್ಪಸಂಖ್ಯಾತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಪ್ರಕರಣ ದಾಖಲಿಸುತ್ತಾರೆ. ಅದೆ ಮೇಲ್ವರ್ಗದ ಜನ ಬಾಯಿಗೆ ಬಂದಹಾಗೆ ಪೋಸ್ಟ್ ಹಾಕುತ್ತಾರೆ ಅವರ ಮೇಲೆ ಪ್ರಕರಣವನ್ನೇ ದಾಖಲಿಸುವುದಿಲ್ಲ, ಒಂದು ವೇಳೆ ಪ್ರಕರಣ ದಾಖಲಿಸಿದರೂ ಬಿ ರಿಪೋರ್ಟ್ ಹಾಕಿ ಪ್ರಕರಣವನ್ನೇ ಮುಕ್ತಾಯಗೊಳಿಸುತ್ತಾರೆ. ಅದೇ ದಲಿತರು ಅಲ್ಪಂಖ್ಯಾತರಾದರೆ ಪ್ರಕರಣವನ್ನು ಮುಂದುವರೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆಲ್ಲ ಒಂದು ರೀತಿಯಲ್ಲಿ ನಮ್ಮಂತವರನ್ನು ನ್ಯಾಯಾಲಯಕ್ಕೆ ಅಲೆಸಿ ಹಿಂಸೆ ನೀಡಬೇಕು ಎಂಬುದೇ ಇವರ ಉದ್ದೇಶವಾಗಿದೆ. ನನ್ನ ಬಂಧನದಿಂದ ನನಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಷ್ಟವಾಗಿದೆ ಎಂದು ಹೇಳಿದರು.







