ಬೆಂಗಳೂರು: ಪುಷ್ಪ ಸಿನೆಮಾದ ಶೈಲಿಯಲ್ಲಿ ರಕ್ತಚಂದನ ಮಾರುತ್ತಿದ್ದ ಆರೋಪಿಯ ಬಂಧನ

ಫೈಲ್ ಚಿತ್ರ
ಬೆಂಗಳೂರು, ಎ.30: ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಸಿನೆಮಾದ ಶೈಲಿಯಲ್ಲಿ ರಕ್ತಚಂದನದ ತುಂಡುಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೋಲಾರ ಜಿಲ್ಲೆಯ ಅಬ್ದುಲ್ ರೆಹಮಾನ್(25) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 20 ಲಕ್ಷ ಮೌಲ್ಯದ 250 ಕೆಜಿ ತೂಕದ 6 ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ರಕ್ತಚಂದನದ ಮರದ ತುಂಡುಗಳನ್ನು ಬೆಂಗಳೂರಿಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆರೋಪಿ ತನ್ನ ಸಹಚರರೊಂದಿಗೆ ಮುಂದಾಗಿದ್ದ. ಖಚಿತ ಮಾಹಿತಿ ಮೇರೆಗೆ ಹಳೆ ಮದ್ರಾಸ್ ರಸ್ತೆಯಲ್ಲಿರುವ ಮೇಡಹಳ್ಳಿ-ಭಟ್ಟರಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ಕಾರಿನೊಂದಿಗೆ ನಿಂತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪರವಾನಿಗೆ ಇಲ್ಲದೆ 6 ರಕ್ತ ಚಂದನದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವುದು ಖಚಿತವಾಗಿದೆ. ಕಾರಿನ ಸಮೇತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





