ʼಬುಲ್ಡೋಝರ್ ದಾಳಿʼಯೊಂದಿಗೆ ಕೊನೆಗೊಂಡ ಖರ್ಗೋನ್ ಕೋಮು ಹಿಂಸಾಚಾರಕ್ಕೆ ‘ಕಾಶ್ಮೀರ ಫೈಲ್ಸ್’ ಬೆಂಕಿ ಹಚ್ಚಿದ್ದು ಹೇಗೆ?

Photo: Twitter@mdmeharban03
ಇತ್ತೀಚಿಗೆ ಬಿಡುಗಡೆಗೊಂಡ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದಲ್ಲಿಯ ಒಂದು ದೃಶ್ಯವು 1990ರ ದಶಕದಲ್ಲಿ ನೆರೆಕರೆಯ ಮುಸ್ಲಿಮರು ವೀಕ್ಷಿಸುತ್ತಿದ್ದಂತೆ ಉಗ್ರಗಾಮಿಗಳು ಹಿಂದು ಮಹಿಳೆಯೋರ್ವಳನ್ನು ಬೆತ್ತಲೆಗೊಳಿಸುತ್ತಿರುವುದನ್ನು ಮತ್ತು ಗರಗಸದಿಂದ ಜೀವಂತವಾಗಿ ಸೀಳುವುದನ್ನು ತೋರಿಸಿದೆ.
ಈ ವರ್ಷದ ಎ.10ರಂದು ಮಧ್ಯಪ್ರದೇಶದ ಖರ್ಗೋನ್ನಲ್ಲಿ ರಾಮನವಮಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಈ ದೃಶ್ಯವನ್ನು ಪುನರಾವರ್ತಿಸಲಾಗಿದ್ದ ಸ್ತಬ್ಧಚಿತ್ರ ಪಾಲ್ಗೊಂಡಿತ್ತು. ಶಿವಸೇನೆಯ ಜಿಲ್ಲಾಧ್ಯಕ್ಷ ರಾಜು ಶರ್ಮಾ ಈ ಸ್ತಬ್ಧಚಿತ್ರವನ್ನು ಪ್ರಾಯೋಜಿಸಿದ್ದರು.

Photo: Scroll.in/supriya sharma
ಟ್ರಾಕ್ಟರ್ ಟ್ರಾಲಿಯ ಹಿಂಭಾಗದಲ್ಲಿ ಚಿತ್ರದಲ್ಲಿ ಮಹಿಳೆಯ ಮಾವನ ಪಾತ್ರವನ್ನು ನಿರ್ವಹಿಸಿರುವ ನಟ ಅನುಪಮ ಖೇರ್ ಅವರ ದಿಗ್ಭ್ರಮೆಗೊಂಡ ಮುಖವಿದ್ದ ಬೃಹತ್ ಪೋಸ್ಟರ್ ಅನ್ನು ಅಳವಡಿಸಲಾಗಿತ್ತು. ‘ಹಿಂದುಗಳೇ ಎಚ್ಚೆತ್ತುಕೊಳ್ಳಿ,ದೇಶದ ಅನ್ಯರಾಜ್ಯಗಳು ಕಾಶ್ಮೀರವಾಗಬಾರದು’ ಎಂಬ ದಪ್ಪಕ್ಷರಗಳು ಈ ಪೋಸ್ಟರ್ನಲ್ಲಿದ್ದವು.

Photo: Scroll.in/supriya sharma
ಸ್ತಬ್ಧಚಿತ್ರದ ಪರಿಣಾಮವನ್ನು ತೀವ್ರಗೊಳಿಸಲು ಚಲನಚಿತ್ರದಿಂದ ಮಹಿಳೆ ಬಿಕ್ಕುತ್ತಿರುವ ಶಬ್ದವನ್ನು ಎರವಲು ಪಡೆಯಲಾಗಿತ್ತು ಮತ್ತು ಅದನ್ನು ‘ಜೈ ಶ್ರೀರಾಮ್’ಮತ್ತು ‘ಹರ ಹರ ಮಹಾದೇವ’ ಎಂಬ ಯುದ್ಧಕೂಗುಗಳನ್ನು ಒಳಗೊಂಡಿದ್ದ ಮ್ಯೂಸಿಕ್ ಟ್ರಾಕ್ನೊಂದಿಗೆ ಮಿಶ್ರಗೊಳಿಸಲಾಗಿತ್ತು. ಮೆರವಣಿಗೆ ಆರಂಭವಾಗುವ ಮುನ್ನ ಅಪರಾಹ್ನ ಎರಡು ಗಂಟೆಗೆ ಪಕ್ಕದಲ್ಲಿಯೇ ಮಸೀದಿಯಿರುವ ತಾಲಾಬ್ ಚೌಕ್ ನಲ್ಲಿ ಹಿಂದು ಗುಂಪುಗಳು ಸಮಾವೇಶಗೊಳ್ಳಲು ಅನುಮತಿಯನ್ನು ನೀಡಲಾಗಿತ್ತು. ಈ ಸ್ಥಳದಲ್ಲಿ ಮೇಲಿನ ಸ್ತಬ್ಧಚಿತ್ರದ ಸೌಂಡ್ ಟ್ರ್ಯಾಕ್ ಅನ್ನು ಗಟ್ಟಿಯಾಗಿ ಕರ್ಕಶವಾಗಿ ನುಡಿಸಲಾಗುತ್ತಿತ್ತು.
ಮೂರು ಗಂಟೆಗಳ ಬಳಿಕ ಸಂಜೆ ಐದು ಗಂಟೆಗೆ ಅಸರ್ ಪ್ರಾರ್ಥನೆಗಾಗಿ ಮುಸ್ಲಿಮರು ಮಸೀದಿಯಲ್ಲಿ ಸೇರಿದಾಗ ಮೆರವಣಿಗೆ ಇನ್ನೂ ಅಲ್ಲಿಂದ ಹೊರಟಿರಲಿಲ್ಲ. ಡಿಸ್ಕ್ ಜಾಕಿಗಳು ಅಬ್ಬರದ ಸಂಗೀತವನ್ನು ಮೊಳಗಿಸುತ್ತಿದ್ದುದನ್ನು ಮತ್ತು ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಾವಿರಾರು ಹಿಂದುಗಳು ಚೌಕದಿಂದ ಹತ್ತಿರದ ಗಲ್ಲಿಗಳಿಗೆ ಹರಡಿಕೊಂಡಿದ್ದನ್ನು ವೀಡಿಯೊಗಳು ತೋರಿಸಿವೆ. ಈ ಪೈಕಿ ಕೆಲವರು ‘ರಾಮ ರಾಜ್ಯ’ದ ಧ್ವಜಗಳನ್ನು ಬೀಸುತ್ತಿದ್ದರು.
ಏಕಾಏಕಿ ಕಲ್ಲುಗಳು ಹಾರಾಡತೊಡಗಿದ್ದವು. ಮಸೀದಿಯ ಹಿಂಬದಿಯಲ್ಲಿರುವ ಗಲ್ಲಿಯಿಂದ ಕಲ್ಲುಗಳನ್ನು ತೂರಲಾಗಿತ್ತು ಎಂದು ಹಿಂದುಗಳು ಹೇಳಿದರೆ, ಮೆರವಣಿಗೆಯಲ್ಲಿದ್ದವರು ಮೊದಲು ಕಲ್ಲುಗಳನ್ನು ಪೊಲೀಸರತ್ತ ತೂರಿದ್ದರು ಎಂದು ಮುಸ್ಲಿಮರು ಹೇಳುತ್ತಾರೆ.

Photo: Scroll.in/supriya sharma
ಸಂಜೆ ಆರು ಗಂಟೆಯ ವೇಳೆಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಗಲಭೆ ಮತ್ತು ಬೆಂಕಿ ಹಚ್ಚುವಿಕೆ ಆರಂಭವಾಗಿತ್ತು. ಮಸೀದಿ ಸಮೀಪದ ನಿವಾಸಿ ವಯಸ್ಸಾಗಿರುವ ವಿಧವೆ ಸಿರಾಜ್ ಬೀ ತನ್ನ ಪುಟ್ಟ ಮನೆಗೆ ಗುಂಪು ಬೆಂಕಿ ಹಚ್ಚಿದಾಗ ಹೆದರಿ ಮನೆಯಿಂದ ಹೊರಗೆ ಧಾವಿಸಿದ್ದರು. ಆಕೆ ಹೊಟ್ಟೆಪಾಡಿಗಾಗಿ ಹೂವಿನ ಮಾಲೆಗಳನ್ನು ಮಾಡುತ್ತಿದ್ದಾರೆ. ಅಂದು ಸುಟ್ಟು ಹೋದ ಅವರ ಸೊತ್ತುಗಳಲ್ಲಿ ಮಗಳ ವರದಕ್ಷಿಣೆಗಾಗಿ ಆಕೆ ಹೊಲಿದಿಟ್ಟಿದ್ದ ಬಟ್ಟೆಗಳೂ ಸೇರಿದ್ದವು.
ಎರಡು ಕಿ.ಮೀ.ದೂರದ ಸಂಜಯ್ ನಗರದಲ್ಲಿ ದಲಿತ ಮಹಿಳೆ ನನ್ನುಬಾಯಿ ಭಂದೋಲೆ ತಾನು ಕಷ್ಟಪಟ್ಟು ನಿರ್ಮಿಸಿದ್ದ ಮನೆಯ ಮುಂಭಾಗವನ್ನು ಬೆಂಕಿಯ ಜ್ವಾಲೆಗಳು ಆವರಿಸಿಕೊಂಡಾಗ ಜೀವವುಳಿಸಿಕೊಳ್ಳಲು ಅಲ್ಲಿಂದ ಓಡಿದ್ದರು. ಆಕೆಯ ಪುತ್ರ ಸಾಲ ಪಡೆದು ಖರೀದಿಸಿದ್ದ ಆಟೊರಿಕ್ಷಾ ಬೆಂಕಿಯಲ್ಲಿ ಸುಟ್ಟು ಕರಕಲಾಗಿತ್ತು.
ಮುಂದಿನ ಐದು ಗಂಟೆಗಳ ಕಾಲ ಖರ್ಗೋನ್ ಆಸ್ಪತ್ರೆಗೆ ಗಾಯಾಳುಗಳ ನಿರಂತರ ಪ್ರವಾಹ ಹರಿದುಬರುತ್ತಲೇ ಇತ್ತು. ಈ ಪೈಕಿ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಶಿವಂ ಶುಕ್ಲಾನನ್ನು ಸಮೀಪದ ಇಂದೋರಿನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸಾಗಿಸುವಂತಾಗಿತ್ತು. ಅದೇ ದಿನ ರಾತ್ರಿ ಶರೀರದ ತುಂಬ ಗಾಯದ ಗುರುತುಗಳಿದ್ದ ಶವವೊಂದನ್ನು ಸ್ಥಳೀಯ ಶವಾಗಾರಕ್ಕೆ ತರಲಾಗಿತ್ತು. ಒಂದು ವಾರದ ಬಳಿಕ ಅದು ಇಬ್ರಾಯಿಷ್ ಖಾನ್ (28) ಎಂಬಾತನ ಶವ ಎಂದು ಗುರುತಿಸಲ್ಪಟ್ಟಿತ್ತು.
ಸುಮಾರು 1.25 ಲ.ಜನಸಂಖ್ಯೆಯನ್ನು ಹೊಂದಿರುವ ಖರ್ಗೋನ್ ಪಟ್ಟಣದಲ್ಲಿ ಕೋಮು ಹಿಂಸಾಚಾರ ಹೊಸದೇನಲ್ಲ. ಪಟ್ಟಣದ ಶೇ.60ರಷ್ಟು ಜನರು ಹಿಂದುಗಳಾಗಿದ್ದರೆ ಉಳಿದವರು ಮುಸ್ಲಿಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉಭಯ ಸಮುದಾಯಗಳ ಉತ್ಸವ ಮೆರವಣಿಗೆಗಳು ಡಿಜೆ ಹಾವಳಿಯಿಂದ ಕೂಡಿರುವ ಪುರುಷ ಆಕ್ರಮಣಶೀಲತೆಯಾಗಿರುವಂತೆ ಕಂಡು ಬರುತ್ತಿವೆ.
ರಾಮನವಮಿ ಗಲಭೆಯನ್ನು ಮುಖಪುಟದ ಸುದ್ದಿಯೆಂದು ಪರಿಗಣಿಸಲಾಗಿರಲಿಲ್ಲ, ಎಷ್ಟೆಂದರೂ ಖರ್ಗೋನ್ ಅಂದು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಭಾರತದಲ್ಲಿನ ಹಲವಾರು ಸ್ಥಳಗಳಲ್ಲಿ ಒಂದಾಗಿತ್ತು. ಆದರೆ ಮರುದಿನ ಬೆಳಿಗ್ಗೆ ನಡೆದಿದ್ದು ಅಂತರರಾಷ್ಟ್ರೀಯ ಗಮನವನ್ನೂ ಸೆಳೆದಿತ್ತು. ಎ.11ರಂದು ಬೆಳಿಗ್ಗೆ ಭೋಪಾಲದಲ್ಲಿ ಮಧ್ಯಪ್ರದೇಶದ ಗೃಹಸಚಿವರು ‘ಕಲ್ಲುಗಳನ್ನು ತೂರುವವರ ಮನೆಗಳನ್ನು ಕಲ್ಲುಗಳ ರಾಶಿಯನ್ನಾಗಿ ಪರಿವರ್ತಿಸಲಾಗುವುದು’ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಮಧ್ಯಾಹ್ನದ ವೇಳೆಗೆ ಖರ್ಗೋನ್ ಇನ್ನೂ ಕರ್ಫ್ಯೂದಡಿ ಇದ್ದಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ನೆರವಿನೊಂದಿಗೆ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಹಸೀನಾ ಫಖ್ರೂರ ಒಂದು ಕೋಣೆಯ ಮನೆಯ ಮೇಲೆ ಬುಲ್ಡೋಜರ್ಗಳು ನುಗ್ಗಿದ್ದವು. ತಾಲಾಬ್ ಚೌಕ್ ಮಸೀದಿಯ ಆವರಣದಲ್ಲಿಯ ಜಾವೇದ್ ಶೇಖ್ ಗೆ ಸೇರಿದ ಔಷಧಿ ಅಂಗಡಿಯ ಮುಂಭಾಗ ಬುಲ್ಡೋಜರ್ ಆಕ್ರಮಣಕ್ಕೆ ತುತ್ತಾಗಿತ್ತು. ವಾಸಿಂ ಶೇಖ್ ಎಂಬ ಅಂಗವಿಕಲ ವ್ಯಕ್ತಿಯ ತಗಡಿನ ಗೂಡಂಗಡಿ ನೆಲಸಮಗೊಂಡಿತ್ತು. ರಾಜ್ಯ ಗೃಹ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಭೋಪಾಲದಲ್ಲಿಯ ಸುದ್ದಿಗಾರರಿಗೆ ರವಾನಿಸಿದ್ದ ಹೇಳಿಕೆಯಂತೆ ಅಂದು ಖರ್ಗೋನ್ನಲ್ಲಿ 49 ಆಸ್ತಿಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಎಲ್ಲ ಆಸ್ತಿಗಳು ಮುಸ್ಲಿಮರಿಗೆ ಸೇರಿದ್ದಾಗಿದ್ದವು.
ಮರುದಿನ ಇನ್ನಷ್ಟು ಆಸ್ತಿಗಳು ನೆಲಸಮಗೊಂಡಿದ್ದವು, ಉಳ್ಳವರನ್ನೂ ಬಿಡಲಾಗಿರಲಿಲ್ಲ. ನಗರದ ಮಾಜಿ ಕಾರ್ಪೊರೇಟರ್ ಆಲಿಂ ಶೇಖ್ ಕುಟುಂಬಕ್ಕೆ ಸೇರಿದ್ದ ಐದು ಅಂತಸ್ತುಗಳ ಹೋಟೆಲ್ ನ ಮುಂಭಾಗವನ್ನು ಕೆಡವಲಾಗಿತ್ತು. ‘ಹೋಟೆಲ್ ನ ಎದುರುಭಾಗ ರಸ್ತೆಯನ್ನು ಆಕ್ರಮಿಸಿಕೊಂಡಿತ್ತು ಎಂದು ಆಡಳಿತವು ಹೇಳುತ್ತಿದೆ.ಆದರೆ ನಮ್ಮ ಪಕ್ಕದ ಕಟ್ಟಡಗಳೂ ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನೇಕೆ ಬಿಡಲಾಗಿದೆ ’ ಎಂದು ಆಲಿಂ ಶೇಖರ ಸಂಬಂಧಿ ಶಾಹಿದ್ ಖಾನ್ ಪ್ರಶ್ನಿಸಿದರು.
ಕಟ್ಟಡಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಿದ್ದು ಮಾಮೂಲು ಅತಿಕ್ರಮಣ ತೆರವು ಕಾರ್ಯಾಚರಣೆಯ ಭಾಗವಾಗಿದೆ ಎಂದು ಆಡಳಿತವು ಪ್ರತಿಪಾದಿಸುತ್ತಿದೆ. ಆದರೆ scroll.in ಜೊತೆ ಮಾತನಾಡಿದ ಇಬ್ಬರು ಹಿರಿಯ ಅಧಿಕಾರಿಗಳು ‘ಶಾಂತಿಯನ್ನು ಮರುಸ್ಥಾಪಿಸಲು’ ಮತ್ತು ‘ಪರಿಸ್ಥಿತಿಯನ್ನು ನಿಯಂತ್ರಿಸಲು’ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿತ್ತು ಎನ್ನುವುದನ್ನು ಒಪ್ಪಿಕೊಂಡರು.
‘ಮುಸ್ಲಿಮರು ಮೊದಲು ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದರು,ಬಳಿಕ ತಮ್ಮ ವ್ಯಾಪಕ ಕುತಂತ್ರದ ಭಾಗವಾಗಿ ಹಿಂದುಗಳ ಮನೆಗಳು ಮತ್ತು ಆಸ್ತಿಗಳ ಮೇಲೆ ದಾಳಿಗಳನ್ನು ನಡೆಸಿದ್ದರು ಎಂದು ಹಿಂದುಗಳಿಗೆ ಮನದಟ್ಟು ಮಾಡಲಾಗಿತ್ತು. ಆದ್ದರಿಂದ ನಾವು ಗಲಭೆ ನಡೆದಿದ್ದ ಸ್ಥಳಗಳನ್ನು ಗುರುತಿಸಿದ್ದೆವು ಮತ್ತು ಅಲ್ಲಿಯ ಅತಿಕ್ರಮಣಗಳನ್ನು ಗುರಿಯಾಗಿಸಿಕೊಂಡಿದ್ದೆವು ’ ಎಂದು ಅವರ ಪೈಕಿ ಓರ್ವ ಅಧಿಕಾರಿ ತಿಳಿಸಿದರು.
ಬಹಳಷ್ಟು ಒತ್ತಡವಿತ್ತು. ಇದನ್ನು ಒಡೆಯಿರಿ,ಅದನ್ನು ಒಡೆಯಿರಿ ಎಂದು ಜನರು ಹೇಳುತ್ತಲೇ ಇದ್ದರು. ಆದರೆ ಆಡಳಿತವು ಅಕ್ರಮ ನಿರ್ಮಾಣಗಳನ್ನು ಮಾತ್ರ ಧ್ವಂಸಗೊಳಿಸಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.
ಅಕ್ರಮ ನಿರ್ಮಾಣದ ಆರೋಪಗಳನ್ನು ಹಲವಾರು ಆಸ್ತಿಗಳ ಮಾಲಿಕರು ಪ್ರಶ್ನಿಸಿದ್ದಾರೆ. ಕಾನೂನಿನಂತೆ ತಮಗೆ ನೋಟಿಸ್ಗಳನ್ನು ನೀಡಿರಲಿಲ್ಲ ಎಂಬ ಅವರ ವಾದವನ್ನು ಜಿಲ್ಲಾಧಿಕಾರಿ ಅನುಗ್ರಹ ಪಿ. ನಿರಾಕರಿಸಿದರು. ನೋಟಿಸ್ಗಳ ಪ್ರತಿಯನ್ನು ಕೋರಿದಾಗ ಆರ್ಟಿಐ ಅರ್ಜಿಯನ್ನು ಸಲ್ಲಿಸುವಂತೆ ಅವರು ಈ ವರದಿಗಾರ್ತಿಗೆ ತಿಳಿಸಿದರು.
ತಾಲಾಬ್ ಚೌಕ್ ನಲ್ಲಿ ಅಧಿಕ ಸಮಯ ಮೆರವಣಿಗೆಯನ್ನು ನಿಲ್ಲಿಸಿಕೊಂಡಿದ್ದಕ್ಕಾಗಿ ಸಂಘಟಕರ ವಿರುದ್ಧ ಕ್ರಮವನ್ನು ಆರಂಭಿಸಲಾಗಿದೆಯೇ ಎಂಬ ಪ್ರಶ್ನೆಗೆ ಅವರು,ಅರ್ಧಕ್ಕಿಂತ ಹೆಚ್ಚಿನ ಜನರು ಅದಾಗಲೇ ಮುಂದಕ್ಕೆ ಸಾಗಿದ್ದರು ಎಂದು ಉತ್ತರಿಸಿದರು.
ಭಾರತದ ಆಡಳಿತಾರೂಢ ಬಿಜೆಪಿಯ ಆದೇಶಗಳಂತೆ ಖರ್ಗೋನ್ ನೆಲಸಮ ಕಾರ್ಯಾಚರಣೆ ಗುಜರಾತ್ ಮತ್ತು ಉತ್ತರ ದಿಲ್ಲಿಯಲ್ಲಿಯೂ ಕಟ್ಟಡಗಳ ಧ್ವಂಸಕ್ಕೆ ಪ್ರೇರೇಪಿಸಿದೆ. ಇದು ಮೊದಲು ಪ್ರಚೋದನೆಗೆ ಮತ್ತು ನಂತರ ದಂಡನೆಗೆ ಒಳಗಾಗುವ ದೇಶಾದ್ಯಂತದ ಮುಸ್ಲಿಮರಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಆದರೆ ಇನ್ನೂ ಕಳವಳದ ವಿಷಯವೆಂದರೆ ನೆಲಸಮ ಕಾರ್ಯಾಚರಣೆಗಳು ಖರ್ಗೋನ್ನಲ್ಲಿ ಹಿಂದುಗಳ ಕೋಪವನ್ನು ತಗ್ಗಿಸಿಲ್ಲ, ಬದಲಿಗೆ ದಿ ಕಾಶ್ಮೀರ ಫೈಲ್ಸ್ ಉದ್ವಿಗ್ನತೆಗಳನ್ನು ಹೆಚ್ಚಿಸುತ್ತಲೇ ಇದೆ. ಖರ್ಗೋನ್ನಲ್ಲಿ ಸ್ಥಿತಿವಂತ ಮುಸ್ಲಿಮರ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದುದು ಮುನ್ಸಿಪಲ್ ಬುಲ್ಡೋಜರ್ ಗಳು ಮಾತ್ರವಲ್ಲ. ಗಲಭೆಯ ನಂತರದ ದಿನಗಳಲ್ಲಿ ನಗರದ ಹೊರವಲಯದಲ್ಲಿಯ ಮುಸ್ಲಿಮರಿಗೆ ಸೇರಿದ ಮೂರು ಕೈಗಾರಿಕಾ ಘಟಕಗಳಿಗೆ ಬೆಂಕಿ ಹಚ್ಚಲಾಗಿತ್ತು.
ಮುಸ್ಲಿಮರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದರೂ ಖರ್ಗೋನ್ ನ ಹಿಂದುಗಳು ಇನ್ನೂ ಸಿಟ್ಟಿನಿಂದ ಕುದಿಯುತ್ತಿದ್ದಾರೆ. ‘ದಿ ಕಾಶ್ಮೀರ ಫೈಲ್ಸ್ ’ ನಂತೆ ಅವರು (ಮುಸ್ಲಿಮರು) ಖರ್ಗೋನ್ ಫೈಲ್ಸ್ ಮಾಡಲು ಹೊರಟಿದ್ದಾರೆ ’ಎಂದು ಬಜರಂಗ ದಳದ ಕಾರ್ಯಕರ್ತ ಮಹೇಶ ಮುಚ್ಚಾಲ್ ಹೇಳಿದ. ಸಂಜಯ ನಗರದಲ್ಲಿರುವ ಆತನ ಮನೆ ಬೆಂಕಿಗಾಗುತಿಯಾಗಿದೆ.
ಇದು ಖರ್ಗೋನ್ನಲ್ಲಿ ಸಾಮಾನ್ಯವಾಗಿ,ಗಲಭೆಯಲ್ಲಿ ಯಾವುದೇ ನಷ್ಟಗಳನ್ನು ಅನುಭವಿಸದವರಲ್ಲಿಯೂ ಕೇಳಿ ಬರುತ್ತಿರುವ ಭಾವನೆಯಾಗಿದೆ. ದಿಲ್ಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ರಾಮನವಮಿಯ ಸಂಜೆ ಖರ್ಗೋನ್ ನಿಂದ 50 ಕಿ.ಮೀ.ದೂರದ ಭಿಕನಗಾಂವ್ ನಲ್ಲಿ ನೀಡಿದ್ದ ಹೇಳಿಕೆಯನ್ನು ಇದು ವಿಲಕ್ಷಣವಾಗಿ ಹೋಲುತ್ತಿದೆ. "ದಿ ಕಾಶ್ಮೀರ ಫೈಲ್ ನಿಂದ ಹಿಂದುಗಳು ಪಾಠ ಕಲಿತುಕೊಳ್ಳದಿದ್ದರೆ ಒಂದಲ್ಲೊಂದು ದಿನ ದಿಲ್ಲಿ, ಬಂಗಾಳ, ಕೇರಳ.....ಅಷ್ಟೇ ಏಕೆ,ಖರ್ಗೋನ್ ಕುರಿತೂ ಇಂತಹ ಚಿತ್ರಗಳು ನಿರ್ಮಾಣಗೊಳ್ಳುತ್ತವೆ" ಎಂದು ಮಿಶ್ರಾ ಹೇಳಿದ್ದರು.
ಭಿಕನಗಾಂವ್ ನಲ್ಲಿ ಮಿಶ್ರಾರ ಭಾಷಣ ಕೇಳಲು 14,000 ಜನರು ಸೇರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂದು ಖರ್ಗೋನ್ ನ ಪೊಲೀಸ್ ಪಡೆಯ ಒಂದು ಭಾಗವನ್ನು ಅಲ್ಲಿ ನಿಯೋಜಿಸಲಾಗಿತ್ತು. ‘ಭಿಕನಗಾಂವ್ನಲ್ಲಿ ಏನಾದರೂ ಸಂಭವಿಸಲಿದೆ ಎಂದು ನಾವು ಹೆದರಿಕೊಂಡಿದ್ದೆವು, ಬದಲಿಗೆ ಅದು ಇಲ್ಲಿಯೇ ಸಂಭವಿಸಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದರು. ದಿ ಕಾಶ್ಮೀರ ಫೈಲ್ಸ್ ಬಗ್ಗೆ ಪಟ್ಟಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ ಎನ್ನುವುದು ಗಲಭೆಯ ನಂತರವೇ ತನಗೆ ಗೊತ್ತಾಗಿತ್ತು ಎಂದರು.
ಅಂದುಕೊಂಡಂತೆಯೇ ನಡೆಯುತ್ತಿದೆ. ರಾಮನವಮಿ ಹಿಂಸಾಚಾರವು ದಿ ಕಾಶ್ಮೀರ ಫೈಲ್ಸ್ ಹುಟ್ಟು ಹಾಕಿರುವ ಭೀತಿಗೆ ಇನ್ನಷ್ಟು ಕುಮ್ಮಕ್ಕು ನೀಡಿದೆ. ಹಿಂದು ಬಹುಸಂಖ್ಯಾತ ಪಟ್ಟಣದಲ್ಲಿ ಸ್ಥಳೀಯ ಹಿಂದುಗಳು ಈಗ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ಪ್ರತಿಫಲನಗಳನ್ನು ನೋಡುತ್ತಿದ್ದಾರೆ. ಹೆಚ್ಚು ನಿಖರವಾಗಿ ಹೇಳಬೇಕೆಂದರೆ ಅಲ್ಪಸಂಖ್ಯಾತ ಹಿಂದು ಪಂಡಿತರ ಮೇಲೆ ಅತ್ಯಾಚಾರವೆಸಗಿ ಅವರನ್ನು ಕೊಲ್ಲುತ್ತಿದ್ದ ಮತ್ತು ಅವರನ್ನು ಕಣಿವೆಯಿಂದ ಓಡಿಸುತ್ತಿದ್ದ ಉಗ್ರಗಾಮಿಗಳನ್ನು ಹೃತ್ಪೂರ್ವಕವಾಗಿ ಬೆಂಬಲಿಸಿದ್ದ ರಕ್ತದಾಹಿ ಸಮುದಾಯವನ್ನಾಗಿ ಮುಸ್ಲಿಮರನ್ನು ಬಿಂಬಿಸಿರುವ ಕಾಶ್ಮೀರ ಫೈಲ್ಸ್ನಲ್ಲಿ ತೋರಿಸಲಾಗಿರುವ ಆವೃತ್ತಿಯನ್ನು ನೋಡುತ್ತಿದ್ದಾರೆ.
ದಿ ಕಾಶ್ಮೀರ ಫೈಲ್ಸ್ ಚಿತ್ರವು ಮುಸ್ಲಿಮರ ಬಗ್ಗೆ ಹಿಂದುಗಳಲ್ಲಿ ಹುಟ್ಟಿಸಿರುವ ದ್ವೇಷ,ಭೀತಿಯನ್ನು ನಿವಾರಿಸುವ ಬದಲು ರಾಜ್ಯದ ಬಿಜೆಪಿ ಸರಕಾರವು ಅದಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಿದೆ. ಕಾಶ್ಮೀರ ಫೈಲ್ಸ್ ನಲ್ಲಿ ತೋರಿಸಲಾಗಿದ್ದೇ ಖರ್ಗೋನ್ನಲ್ಲಿ ನಡೆದಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಮಲ್ ಪಟೇಲ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.







