ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿ ಜ.ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

PHOTO COURTESY:TWITTER/@DilipKulariya
ಹೊಸದಿಲ್ಲಿ,ಎ.30: ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿ ಜ.ಎಂ.ಎಂ.ನರವಣೆ ಅವರಿಂದ ಶನಿವಾರ ಅಧಿಕಾರವನ್ನು ಸ್ವೀಕರಿಸಿದರು. ಹುದ್ದೆಯಿಂದ ನಿವೃತ್ತಗೊಂಡ ಜ.ನರವಣೆ ಅವರಿಗೆ ಸಾಂಪ್ರದಾಯಿಕ ಗೌರವ ರಕ್ಷೆಯನ್ನು ನೀಡಲಾಯಿತು. ಪಾಂಡೆ ಭಾರತೀಯ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಮೊದಲ ಅಧಿಕಾರಿಯಾಗಿದ್ದಾರೆ. ಅವರು 1982,ಡಿಸೆಂಬರ್ನಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಗೆ ಸೇರ್ಪಡೆಗೊಂಡಿದ್ದರು.
2001,ಡಿಸೆಂಬರ್ನಲ್ಲಿ ಸಂಸತ್ ಮೇಲಿನ ದಾಳಿಯ ಬಳಿಕ ದೇಶದ ಪಶ್ಚಿಮ ಗಡಿಗೆ ಭಾರೀ ಪ್ರಮಾಣದಲ್ಲಿ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲು ನಡೆಸಲಾಗಿದ್ದ ಆಪರೇಷನ್ ಪರಾಕ್ರಮ್ನ ಸಂದರ್ಭ ಪಾಂಡೆ ಅವರು ಇಂಜಿನಿಯರ್ ರೆಜಿಮೆಂಟ್ನ ಕಮಾಂಡರ್ ಆಗಿದ್ದರು.
ಈಸ್ಟರ್ನ್ ಕಮಾಂಡ್ ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಪಾಂಡೆ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ನ ಕಮಾಂಡರ್-ಇನ್-ಚೀಫ್ ಆಗಿದ್ದರು.ಪಾಂಡೆ ಇಥಿಯೋಪಿಯಾ ಮತ್ತು ಎರಿಟ್ರಿಯಾಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಅಭಿಯಾನಗಳಲ್ಲಿ ಮುಖ್ಯ ಇಂಜಿನಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು.





