ಈದುಲ್ ಫಿತ್ರ್: ರವಿವಾರ ಚಂದ್ರ ದರ್ಶನ ಸಮಿತಿ ಸಭೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ. 30: ಮುಸ್ಲಿಮರ ಪವಿತ್ರ ರಮಝಾನ್ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನ ಸಮಿತಿಯ ಸಭೆಯು ನಾಳೆ(ಮೇ 1) ಸಂಜೆ 7 ಗಂಟೆಗೆ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.
ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಅಪೇಕ್ಷಾ ಸತೀಶ್ ಪವಾರ್ ಶನಿವಾರ(ಎ.30) ಅಧಿಸೂಚನೆಯನ್ನು ಹೊರಡಿಸಿ, ರಮಝಾನ್ ಹಬ್ಬದ ಅಂಗವಾಗಿ ಮೇ 3ರಂದು ಮಂಜೂರು ಮಾಡಲಾಗಿದ್ದ ಸರಕಾರಿ ರಜೆಯನ್ನು, ಚಂದ್ರ ದರ್ಶನ ಸಮಿತಿಯ ತೀರ್ಮಾನದಂತೆ ಮೇ 2ರಂದು ಮಂಜೂರು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ. ಮುಹಮ್ಮದ್ ಶಾಫಿ ಸಅದಿ, ‘ರಮಝಾನ್ ಮಾಸದ 29ನೆ ಉಪವಾಸ ಮುಗಿದ ಬಳಿಕ ಚಂದ್ರ ದರ್ಶನ ಸಮಿತಿ ಸಭೆ ನಡೆಸುವುದು ಸಂಪ್ರದಾಯ. ಅದರಂತೆ, ನಾಳೆ(ಮೇ 1) ಸಂಜೆ ಸಭೆ ನಡೆಯಲಿದೆ. ಸರಕಾರದ ಅಧಿಸೂಚನೆಯಲ್ಲಿ ಚಂದ್ರ ದರ್ಶನ ಸಮಿತಿಯ ತೀರ್ಮಾನ ಎಂದು ನಮೂದಿಸಿರುವುದು ಆಶ್ಚರ್ಯ ತಂದಿದೆ' ಎಂದು ಸ್ಪಷ್ಟಣೆ ನೀಡಿದರು.





