ಬೆಂಗಳೂರು: ಪತಿ ಹತ್ಯೆಗೈದ ಆರೋಪಿ ಪತ್ನಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.30: ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಕೌಂಟೆಂಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕೌಂಟೆಂಟ್ ಪತ್ನಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ತಡರಾತ್ರಿ ಚಾಕುವಿನಿಂದ ಯಶವಂತಪುರದ ಎಂ.ಕೆ ನಗರದ ಮನೆಯೊಂದರಲ್ಲಿ ಶಂಕರ್ರೆಡ್ಡಿ(35) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಪತ್ನಿ ರಾಣಿ(27) ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಇದ್ದಾಗಲೇ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ವಿವಾಹೇತರ ಸಂಬಂಧಕ್ಕಾಗಿ ಹತ್ಯೆ: ಚಿತ್ತೂರಿನ ತನ್ನ ಗ್ರಾಮದ ಯುವಕನ ಜೊತೆ ವಿವಾಹೇತರ ಸಂಬಂಧ ಇರಿಸಿಕೊಳ್ಳಲು ಅಡ್ಡಿಯಾಗಿದ್ದ ಪತಿ ಶಂಕರ್ನನ್ನು ಕೊಲ್ಲಲು ರಾಣಿ ಪ್ಲಾನ್ ಮಾಡಿದ್ದಳು. ಕೆಲಸ ಮುಗಿಸಿ ಮನೆಗೆ ಬಂದ ಪತಿ ರಾತ್ರಿ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾಳೆ. ನಂತರ ತನ್ನ ಕೈಗೂ ಕೊಯ್ದು ಗಾಯ ಮಾಡಿಕೊಂಡಿದ್ದಳು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೋಷಕರನ್ನು ಕಂಡ ಮಕ್ಕಳು ತಕ್ಷಣ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ಯಶವಂತಪುರ ಠಾಣೆಗೆ ಮಾಹಿತಿ ಲಭ್ಯವಾಗಿತ್ತು.
ಪ್ರಕರಣದ ತನಿಖೆಯ ವೇಳೆ ಮಹಿಳೆ ಮೇಲೆ ಅನುಮಾನಗೊಂಡ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ನಿಜ ಸಂಗತಿ ಬಯಲಾಗಿದ್ದು, ಆರೋಪಿ ರಾಣಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಯಶವಂತಪುರ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಿಯಕರನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.





