ಆ್ಯಸಿಡ್ ದಾಳಿ ಪ್ರಕರಣ: ಮ್ಯಾಜಿಸ್ಟ್ರೇಟ್ ಮುಂದೆ ಯುವತಿ ಹೇಳಿಕೆ

ಬೆಂಗಳೂರು, ಎ.30: ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ದಾಳಿಗೊಳಗಾದ ಯುವತಿ ಶನಿವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದು, ಹೇಳಿಕೆ ದಾಖಲಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಘಟನೆಯ ಸಂಪೂರ್ಣ ಮಾಹಿತಿಯನ್ನು ಯುವತಿ ನೀಡಿದ್ದು ಕೃತ್ಯ ಎಸಗಿದ್ದು ನಾಗೇಶ್ ಎಂದು ತಿಳಿಸಿದ್ದಾಳೆ. ಇಂಡಿಯನ್ ಎವಿಡೆನ್ಸ್ ಆಕ್ಟ್ 32(1) ರ ಅಡಿಯಲ್ಲಿ ಸಂತ್ರಸ್ತ ಯುವತಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯಲ್ಲೇ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಪಡೆದುಕೊಂಡಿದೆ.
ಯುವತಿಯ ಹೇಳಿಕೆ: ಎಪ್ರಿಲ್ 27 ರಂದು 9 ಗಂಟೆ ನಾನು ಕೆಲಸ ಮಾಡುವ ಮುತ್ತೂಟ್ ಕಚೇರಿಗೆ ಬಂದಿದ್ದ ನಾಗೇಶ್, ನೀನು ನನ್ನನ್ನ ಪ್ರೀತಿಸಿ ಮದುವೆಯಾಗಲೇ ಬೇಕು ಇಲ್ಲದಿದ್ದರೆ ಯಾರಿಗೂ ಸಿಗದಂತೆ ಮಾಡುತ್ತಿನಿ ಎಂದು ಬೆದರಿಕೆ ಹಾಕಿದ್ದ, ನಂತರ ಕಚೇರಿ ಮ್ಯಾನೇಜರ್ ಗೆ ಅವಳಿಗೆ ಏನು ಮಾಡುತ್ತೀನಿ ನೋಡುತ್ತೀರಿ ಎಂದು ಹೇಳಿಹೋಗಿದ್ದ. ಈ ವಿಚಾರವನ್ನು ಅಂದೇ ನನ್ನ ದೊಡ್ಡಮ್ಮನಿಗೂ ತಿಳಿಸಿದ್ದೆ ದೊಡ್ಡಮ್ಮ ಕರೆ ಮಾಡಿ ನಾಗೇಶ ಅಣ್ಣನಿಗೂ ವಿಚಾರ ಹೇಳಿದ್ದರು.
ನಾಗೇಶನ ಅಣ್ಣ ಬುದ್ಧಿವಾದ ಹೇಳೋದಾಗಿ ಹೇಳಿದ್ದರು. ಆದರೆ ಎಪ್ರಿಲ್ 28 ರಂದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆ್ಯಸಿಡ್ ತೆಗೆದುಕೊಂಡು ಬಂದ ನನ್ನನ್ನು ಅಡ್ಡಗಟ್ಟಿ ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಎದುರು ನಡೆದ ಘಟನೆಯನ್ನು ಉದ್ದೇಶವನ್ನು ಹೇಳಿದ್ದಾಳೆ.





