ಜಾತಿ ದೌರ್ಜನ್ಯ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಖಂಡಿಸಿ ಬಹುತ್ವ ಕರ್ನಾಟಕದಿಂದ ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಂಗಳೂರು, ಎ.30: ದಲಿತರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ವಿರುದ್ಧ ಬಹುತ್ವ ಕರ್ನಾಟಕದ ಕರೆಗೆ ಓಗೊಟ್ಟು ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ 300 ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಜಮಾಯಿಸಿದ್ದರು.
ಜಾತಿ ದೌರ್ಜನ್ಯ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ತಡೆಯುವಲ್ಲಿ ಕರ್ನಾಟಕ ಸರಕಾರದ ಹೀನಾಯ ವೈಫಲ್ಯವನ್ನು ಪ್ರತಿಭಟನಾಕಾರರು ಖಂಡಿಸಿದರು.
ಕರ್ನಾಟಕ ಇಂದು ಗಂಭೀರ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಿಂಸಾಚಾರಕ್ಕೆ ಮುಕ್ತ ಕರೆಗಳು, ಅಸಂವಿಧಾನಿಕ ಮತ್ತು ಅಮಾನವೀಯ ಆರ್ಥಿಕ ಬಹಿಷ್ಕಾರಗಳಿಗೆ ಕರೆಗಳು, ಪೊಲೀಸ್ ಸಮ್ಮುಖದಲ್ಲಿ ಮುಸ್ಲಿಂ ಬೀದಿ ವ್ಯಾಪಾರಿಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿವೆ. ಸರಕಾರ ಮೌನವಾಗಿರುವಾಗ ಬಲಪಂಥೀಯ ಸಂಘಟನೆಗಳು ವೈಷಮ್ಯ ಸೃಷ್ಟಿಸುತ್ತಿವೆ ಎಂದು ಪ್ರಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬರಹಗಾರ ರಾಮಚಂದ್ರ ಗುಹಾ, ಇಂದು ಭಯದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಈ ನಿರಂಕುಶ ಆಡಳಿತದ ವಿರುದ್ಧ ಹೋರಾಡಲು ನಾವು ಒಗ್ಗೂಡಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಗೃಹ ಕಾರ್ಮಿಕರ ಸಂಘದ ಲಕ್ಷ್ಮೀ ಮಾತನಾಡಿ, ಧರ್ಮದ ಮೇಲಿನ ಉದ್ದೇಶಿತ ದಾಳಿಯ ಭಾರವನ್ನು ಮಹಿಳೆಯರು ಹೇಗೆ ಎದುರಿಸುತ್ತಾರೆ. ಉದಾಹರಣೆಗೆ ಕರ್ನಾಟಕ ಹೈಕೋರ್ಟ್‍ನ ಆದೇಶಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸಿದ ಹುಡುಗಿಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಯಿತು ಎಂದು ಹೇಳಿದರು.
ಬರಹಗಾರ ಹುಲಿಕುಂಟೆ ಮೂರ್ತಿ ಮಾತನಾಡಿ, ಇಂದು ರಾಜ್ಯ ನಾವು ತಿನ್ನುವುದನ್ನು, ನಾವು ಧರಿಸುವುದನ್ನು, ಮಾತನಾಡುವುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ನಮ್ಮನ್ನು ವಿಭಜಿಸುವುದಕ್ಕಿಂತ ನಮ್ಮನ್ನು ಒಂದುಗೂಡಿಸುವ ಅಂಶಗಳೇ ಹೆಚ್ಚಾಗಬೇಕು. ಸಾಮರಸ್ಯ ಮತ್ತು ಸೌಹಾರ್ದತೆಯೇ ರಾಜ್ಯದ ನಿಜವಾದ ಸಂಸ್ಕೃತಿಯೇ ಹೊರತು ಈ ವಿಭಜಕ ಮಾರ್ಗಗಳಲ್ಲ ಎಂದರು.
.jpg)







