ದಕ್ಷಿಣ ಸುಡಾನ್ ನಲ್ಲಿ ಶಾಂತಿಪಾಲನಾ ಪಡೆಯ ಭಾರತೀಯ ಯೋಧರಿಗೆ ವಿಶ್ವಸಂಸ್ಥೆ ಪುರಸ್ಕಾರ

PHOTO:TWITTER/@DilliDurAst
ವಿಶ್ವಸಂಸ್ಥೆ, ಎ.30: ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗದ (ಯುಎನ್ಎಂಐಎಸ್ಎಸ್) ಜತೆ ಕೈಜೋಡಿಸಿರುವ 1,160 ಭಾರತೀಯರ ಯೋಧರು ಸಲ್ಲಿಸಿದ ಅಸಾಧಾರಣ ಸೇವೆಗಾಗಿ ವಿಶ್ವಸಂಸ್ಥೆಯ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಶಾಂತಿಪಾಲನಾ ಯೋಧರು ಕೇವಲ ನಾಗರಿಕರ ರಕ್ಷಣಾ ಕಾರ್ಯಕ್ಕಷ್ಟೇ ಸೀಮಿತವಾಗಿಲ್ಲ. ದಕ್ಷಿಣ ಸುಡಾನ್ನಲ್ಲಿರುವ ಭಾರತದ ಸುಮಾರು 1,160 ಯೋಧರು ರಸ್ತೆ ಅಭಿವೃದ್ಧಿ, ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಸ್ಥಾಪನೆಯ ಜತೆಗೆ, ಮಾನವ ಮತ್ತು ಪ್ರಾಣಿಗಳಿಗೆ ವೈದ್ಯಕೀಯ ನೆರವನ್ನೂ ಒದಗಿಸಿದ್ದು ವಿಶ್ವಸಂಸ್ಥೆಯ ಗೌರವ ಪದಕ ಪಡೆಯಲು ಅರ್ಹವಾಗಿದ್ದಾರೆ ಎಂದು ಯುಎನ್ಎಂಐಎಸ್ಎಸ್ ಗುರುವಾರ ಟ್ವೀಟ್ ಮಾಡಿದೆ.
ದಕ್ಷಿಣ ಸುಡಾನ್ ನ ಅಪ್ಪರ್ ನೈಲ್ ಪ್ರಾಂತದಲ್ಲಿ ಶಾಂತಿಪಾಲನಾ ಪಡೆಯ ಸದಸ್ಯರಾಗಿ ಕೆಲಸ ಮಾಡುತ್ತಿರುವ 1,160 ಯೋಧರು ನಾಗರಿಕರ ರಕ್ಷಣೆ, ಇಂಜಿನಿಯರಿಂಗ್ ಕಾರ್ಯಯೋಜನೆ ನಿರ್ವಹಿಸುವುದು, ಮಾನವರು ಮತ್ತು ಪ್ರಾಣಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು ಸೇರಿದಂತೆ ನಿರ್ವಹಿಸಿದ ಅಸಾಧಾರಣ ಮತ್ತು ಬಹುಮುಖ ಕಾರ್ಯಕ್ಕಾಗಿ ಪದಕ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ಇಂಜಿನಿಯರಿಂಗ್ ತುಕಡಿ ಮಲಾಕಲ್ನಿಂದ ಅಬ್ವಾಂಗ್ ನಗರದವರೆಗಿನ 75 ಕಿ.ಮೀ ದೂರದ ರಸ್ತೆಯನ್ನು ಅಭಿವೃದ್ಧಿಗೊಳಿಸಿದೆ. ಜತೆಗೆ, ಅಪ್ಪರ್ ನೈಲ್ ಪ್ರದೇಶದಲ್ಲಿ ಸಂಚಾರಿ ಪಶು ವೈದ್ಯಕೀಯ ಘಟಕದ ಮೂಲಕ ಹಸು, ಕುರಿ, ಆಡು, ಕತ್ತೆ ಹಾಗೂ ಉತರ ಜಾನುವಾರುಗಳಿಗೆ ವೈದ್ಯಕೀಯ ನೆರವು ಒದಗಿಸಿದೆ. ರೆಂಕ್ ನಗರದಲ್ಲಿ ಕೇವಲ 2 ದಿನದಲ್ಲಿ 1,749 ಪ್ರಾಣಿಗಳಿಗೆ ವೈದ್ಯಕೀಯ ನೆರವು ನೀಡಿದೆ ಎಂದು ಯುಎನ್ಎಂಐಎಸ್ಎಸ್ ಹೇಳಿದೆ.
ಈ ಪ್ರದೇಶದಲ್ಲಿ ವೃತ್ತಿಪರ ತರಬೇತಿ ಶಿಬಿರ ಆಯೋಜಿಸುತ್ತಿದ್ದೇವೆ. ಕಳೆದ ಡಿಸೆಂಬರ್ನಲ್ಲಿ ಮರಗೆಲಸ, ಕಟ್ಟಡ ನಿರ್ಮಾಣ ಕಾಮಗಾರಿ, ಮಳೆ ನೀರು ಕೊಯ್ಲು ಮುಂತಾದ ಹಲವು ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಿದ್ದು ಇಲ್ಲಿನ ಯುವಜನತೆ ವೃತ್ತಿಪರರಾಗಿ ತಮ್ಮ ಕುಟುಂಬದ ನಿರ್ವಹಣೆ ನಡೆಸಲು ಸಮರ್ಥರಾಗಿದ್ದಾರೆ. ಜತೆಗೆ ಬಾಲಕ ಬಾಲಕಿಯರಿಗೆ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ ನಡೆಸಿದ್ದೇವೆ. ನಾವು ಇಲ್ಲಿಂದ ತೆರಳಿದ ಬಳಿಕವೂ ಇಲ್ಲಿನ ಜನತೆ ನಮ್ಮನ್ನು ಸಕಾರಾತ್ಮ ವಿಷಯಗಳಿಗಾಗಿ ನೆನಪಿಸಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಭಾರತದ ತುಕಡಿಯ ಕಮಾಂಡರ್ ಕರ್ನಲ್ ವಿಜಯ್ ರಾವತ್ ಹೇಳಿರುವುದಾಗಿ ವರದಿಯಾಗಿದೆ.







