ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 50ಕ್ಕೂ ಅಧಿಕ ಮಂದಿ ಮೃತ್ಯು

photo:twitter/@ashishranjan071
ಕಾಬೂಲ್, ಎ.30: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಂದರ್ಭ ಶಕ್ತಿಶಾಲಿ ಬಾಂಬ್ ಸ್ಫೋಟಿಸಿದ್ದು ಕನಿಷ್ಟ 50 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯಾ ಬಾಂಬರ್ ಈ ದಾಳಿ ನಡೆಸಿರುವುದಾಗಿ ಶಂಕಿಸಲಾಗಿದೆ.
ಕಾಬೂಲ್ ನ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಶುಕ್ರವಾರ ನಡೆದ ಝಿಕ್ರ್ (ಧಾರ್ಮಿಕ ಸಭೆ) ಸಂದರ್ಭ ಬಾಂಬ್ ಸ್ಫೋಟಿಸಿದ್ದು 10 ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ ಎಂದು ದೇಶದ ಆಂತರಿಕ ಸಚಿವಾಲಯದ ಸಹಾಯಕ ವಕ್ತಾರರು ಹೇಳಿದ್ದಾರೆ.
ಆತ್ಮಹತ್ಯಾ ಬಾಂಬರ್ ಮಸೀದಿಯಲ್ಲಿ ಪ್ರಾರ್ಥನೆಗೆ ಸೇರಿದ ಜನರ ಗುಂಪಿನೊಳಗೆ ಸೇರಿಕೊಂಡು ಸ್ಫೋಟ ನಡೆಸಿರುವ ಸಾಧ್ಯತೆಯಿದೆ ಎಂದು ಮಸೀದಿಯ ಮುಖ್ಯಸ್ಥ ಸಯಿದ್ ಫಾಝಿಲ್ ಆಘಾ ಹೇಳಿದ್ದಾರೆ. ಸ್ಫೋಟದಿಂದ ಎಲ್ಲೆಲ್ಲೂ ಕಪ್ಪು ಹೊಗೆ ಆವರಿಸಿತು. ಮೃತದೇಹಗಳು ಅಲ್ಲಲ್ಲಿ ಬಿದ್ದಿದ್ದವು. ನಾನೂ ಮಸೀದಿಯಲ್ಲಿದ್ದೆ, ಆದರೆ ಅದೃಷ್ಟವಶಾತ್ ಬದುಕುಳಿದೆ. ಆದರೆ ನನ್ನೊಂದಿಗಿದ್ದ ಸೋದರಳಿಯ ಮೃತಪಟ್ಟಿದ್ದಾನೆ ಎಂದು ಆಘಾ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಗಾಯಗೊಂಡ ಹಲವರನ್ನು ಆಂಬ್ಯುಲೆನ್ಸ್ ನ ಒಳಗೆ ತುಂಬಿಸುತ್ತಿರುವುದನ್ನು ಕಂಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಇದುವರೆಗೆ 66 ಮೃತದೇಹ ಹಾಗೂ 78 ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ. ಕಾಬೂಲ್ ನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ 21 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾಬೂಲ್ನ ಮತ್ತೊಂದು ಆಸ್ಪತ್ರೆಯಲ್ಲಿ 49 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
ಅಫ್ಗಾನ್ನಲ್ಲಿರುವ ವಿಶ್ವಸಂಸ್ಥೆಯ ನಿಯೋಗ ಮತ್ತು ಅಮೆರಿಕ ಬಾಂಬ್ ದಾಳಿಯನ್ನು ಖಂಡಿಸಿವೆ. ಅಫ್ಗಾನಿಸ್ತಾನದಲ್ಲಿ ಇತ್ತೀಚಿನ ದಿನದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ದಾಳಿ ಹೆಚ್ಚುತ್ತಿದ್ದು ಶುಕ್ರವಾರ ನಡೆದ ಬಾಂಬ್ ಸ್ಫೋಟದ ಸಂದರ್ಭ ತನ್ನ ಇಬ್ಬರು ಸಿಬಂದಿಗಳು ಮಸೀದಿಯಲ್ಲಿದ್ದರು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಅಫ್ಗಾನ್ ವ್ಯವಹಾರಕ್ಕೆ ಸಂಬಂಧಿಸಿದ ಉಪವಿಶೇಷ ಪ್ರತಿನಿಧಿ ಮೆಟ್ಟ್ ನೂಡ್ಸನ್ ಹೇಳಿದ್ದಾರೆ. ಬಾಂಬ್ ಸ್ಫೋಟವನ್ನು ಖಂಡಿಸಿರುವ ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.







