ಐಪಿಎಲ್: ಮುಂಬೈಗೆ ಮೊದಲ ಜಯ
*ಸೂರ್ಯಕುಮಾರ್ ಅರ್ಧಶತಕ

ನವಿ ಮುಂಬೈ, ಎ.30: ಸೂರ್ಯಕುಮಾರ್ ಯಾದವ್ ಅರ್ಧಶತಕದ(51 ರನ್, 39 ಎಸೆತ,5 ಬೌಂಡರಿ, 2 ಸಿಕ್ಸರ್)ನೆರವಿನಿಂದ ಶನಿವಾರ ನಡೆದ ಐಪಿಎಲ್‌ನ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನು 5 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಈ ವರ್ಷದ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ಬಳಗ ಸತತ 8 ಪಂದ್ಯಗಳಲ್ಲಿ ಸೋಲುಂಡಿತ್ತು.
ಗೆಲ್ಲಲು 159 ರನ್ ಗುರಿ ಪಡೆದ ಮುಂಬೈ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಮುಂಬೈ ಪರ ತಿಲಕ್ ವರ್ಮಾ(35ರನ್), ಇಶಾನ್ ಕಿಶನ್(26), ಟಿಮ್ ಡೇವಿಡ್(ಔಟಾಗದೆ 20) ಹಾಗೂ ಪೊಲಾರ್ಡ್(10)ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕದ(67 ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್)ಸಹಾಯದಿಂದ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಬಟ್ಲರ್ ಸರ್ವಾಧಿಕ ಸ್ಕೋರ್ ಗಳಿಸಿ ಏಕಾಂಗಿ ಹೋರಾಟ ನೀಡಿದರು. ಆರ್.ಅಶ್ವಿನ್(21 ರನ್), ಮಿಚೆಲ್(17 ರನ್), ಸಂಜು ಸ್ಯಾಮ್ಸನ್(16), ದೇವದತ್ತ ಪಡಿಕ್ಕಲ್(15 ರನ್) ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲರಾದರು. 3ನೇ ವಿಕೆಟ್‌ಗೆ ಬಟ್ಲರ್ ಹಾಗೂ ಮಿಚೆಲ್ ಸೇರಿಸಿದ 37 ರನ್ ರಾಜಸ್ಥಾನ ಇನಿಂಗ್ಸ್‌ನ ಗರಿಷ್ಠ ಜೊತೆಯಾಟವಾಗಿತ್ತು.
ಸ್ಪಿನ್ನರ್ ಹೃತಿಕ್ ಶೊಕೀನ್ ಬೌಲಿಂಗ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಸಿಡಿಸಿದ ಬಟ್ಲರ್ 48 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು.
ಮುಂಬೈ ಬೌಲಿಂಗ್ ವಿಭಾಗದಲ್ಲಿ ಮೆರೆಡಿತ್(2-24), ಹೃತಿಕ್ ಶೊಕೀನ್(2-47)ತಲಾ 2 ವಿಕೆಟ್‌ಗಳನ್ನು ಪಡೆದರು. ಕುಮಾರ್ ಕಾರ್ತಿಕೇಯ(1-19) ಹಾಗೂ ಸ್ಯಾಮ್ಸ್(1-32)ತಲಾ 1 ವಿಕೆಟ್ ಪಡೆದರು.







