ಅಲ್ಅಖ್ಸಾದಲ್ಲಿ ಇಸ್ರೇಲ್ ಕಾರ್ಯಾಚರಣೆ: ಫೆಲೆಸ್ತೀನ್ ವ್ಯಕ್ತಿ ಸಹಿತ ಇಬ್ಬರು ಮೃತ್ಯು

photo:twitter
ಜೆರುಸಲೇಂ, ಎ.30: ಆಕ್ರಮಿಕ ಪಶ್ಚಿಮ ದಂಡೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಪೆಲೆಸ್ತೀನ್ ವ್ಯಕ್ತಿ ಹಾಗೂ ಇಸ್ರೇಲ್ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಶುಕ್ರವಾರ ಪಶ್ಚಿಮ ದಂಡೆಯ ಅಲ್ಅಖ್ಸಾ ಮಸೀದಿಯ ಆವರಣದ ಮೇಲೆ ದಾಳಿ ನಡೆಸಿದ ಇಸ್ರೇಲ್ ಸೇನೆ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ. ಬಳಿಕ ಅಝೂನ್ ನಗರದಲ್ಲಿ ಇಸ್ರೇಲ್ ಪಡೆ ಪೆಲೆಸ್ತೀನ್ ನ ಯಹ್ಯಾ ಅದ್ವಾನ್ ಎಂಬ ಯುವಕನ ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
ಇದರೊಂದಿಗೆ ಮಾರ್ಚ್ ನಿಂದ ಈ ಪ್ರದೇಶದಲ್ಲಿ ಹತ್ಯೆಯಾದ ಫೆಲೆಸ್ತೀನೀಯರ ಸಂಖ್ಯೆ 26ಕ್ಕೇರಿದೆ ಎಂದು ಅಲ್ಜಝೀರಾ ವರದಿ ಮಾಡಿದೆ. ಶುಕ್ರವಾರ ಅಲ್ಅಖ್ಸಾ ಮಸೀದಿ ಆವರಣದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆ ಸಂದರ್ಭ 42 ಮಂದಿ ಗಾಯಗೊಂಡಿರುವುದಾಗಿ ಪೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಹೇಳಿದೆ. ಇಸ್ರೇಲ್ ಸೇನೆ ರಬ್ಬರ್ ಲೇಪಿಸಿದ ಬುಲೆಟ್ ಮತ್ತು ಅಶ್ರುವಾಯು ಪ್ರಯೋಗಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಸ್ರೇಲ್ ಸೇನೆಯ ಕಾರ್ಯಾಚರಣೆ ಖಂಡಿಸಿ ಮಸೀದಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ಏರಿಯಲ್ ನಗರದ ಇಸ್ರೇಲ್ ವಸಾಹತು ಪ್ರದೇಶದಲ್ಲಿ ಇಸ್ರೇಲ್ನ ಭದ್ರತಾ ಯೋಧನ ಮೇಲೆ ಆಕ್ರಮಣ ನಡೆಸಿ ಹತ್ಯೆ ನಡೆಸಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್ ಯೋಧನ ಹತ್ಯೆಯನ್ನು ‘ಧೀರ ಕಾರ್ಯಾಚರಣೆ’ ಎಂದು ಶ್ಲಾಘಿಸಿರುವ ಹಮಾಸ್ ಸಂಘಟನೆ, ಅಲ್ಅಖ್ಸಾ ಮಸೀದಿಯಲ್ಲಿ ನಡೆದ ಘಟನೆಗೆ ಇದು ಪ್ರತೀಕಾರವಾಗಿದೆ ಎಂದಿದೆ.







