ಉತ್ತರ ಪ್ರದೇಶ: ಪ್ರಾರ್ಥನಾ ಸ್ಥಳಗಳಿಂದ 45 ಸಾವಿರ ಧ್ವನಿವರ್ಧಕ ತೆರವು

ಲಕ್ನೋ: ಸೋಮವಾರಿಂದ ಉತ್ತರ ಪ್ರದೇಶದಲ್ಲಿ ಆರಂಭವಾಗಿರುವ ರಾಜ್ಯವ್ಯಾಪಿ ಅಭಿಯಾನದ ಅನ್ವಯ ರಾಜ್ಯಾದ್ಯಂತ ವಿವಿಧ ಪ್ರಾರ್ಥನಾ ಸ್ಥಳಗಳಿಂದ ಒಟ್ಟು 45773 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
"ಈ ಅಭಿಯಾನದ ಅನ್ವಯ ರಾಜ್ಯದೆಲ್ಲೆಡೆ ವಿವಿಧ ಧಾರ್ಮಿಕ ಸ್ಥಳಗಳಿಂದ 45773 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಹಾಗೂ 58861 ಧ್ವನಿವರ್ಧಕಗಳ ಸಾಮರ್ಥ್ಯವನ್ನು ಕಡಿಮೆ ಮಾಡಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಉತ್ತರ ಪ್ರದೇಶದ ಗೃಹ ಇಲಾಖೆ ಎ. 23ರಂದು ಆದೇಶ ಹೊರಡಿಸಿ, ಧಾರ್ಮಿಕ ಸ್ಥಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ವಿವಿಧ ಜಿಲ್ಲೆ ಹಾಗೂ ಪೊಲೀಸ್ ಕಮಿಷನರೇಟ್‍ಗಳಿಂದ ಎ. 30ರ ಒಳಗಾಗಿ ಧ್ವನಿವರ್ಧಕ ತೆರವುಗೊಳಿಸಿ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಗೆ ಅನುಗುಣವಾಗಿ ಧ್ವನಿ ಗಾತ್ರವನ್ನು ಕಡಿಮೆ ಮಾಡಿ, ಅನುಸರಣಾ ವರದಿಯನ್ನು ನೀಡುವಂತೆಯೂ ಕೇಳಲಾಗಿತ್ತು. ಇತರರ ಅನಾನುಕೂಲಕ್ಕೆ ಕಾರಣವಾಗದಂತೆ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಎ. 18ರಂದು ಸೂಚಿಸಿದ್ದರು.
ನಿಗದಿತ ನಿಯಮಾವಳಿಗಳನ್ನು ಉಲ್ಲಂಘಿಸಿ ಧ್ವನಿವರ್ಧಕಗಳಲ್ಲಿ ಆಝಾನ್ ಮತ್ತು ಹನುಮಾನ್ ಚಾಲೀಸಾ ಹಾಡುವ ಬಗ್ಗೆ ವಿವಾದ ಎದ್ದ ಹಿನ್ನೆಲೆಯಲ್ಲಿ ಸಿಎಂ ಈ ಆದೇಶ ನೀಡಿದ್ದರು. ಶುಕ್ರವಾರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಅಲ್ವಿದಾ ಕಿ ನಮಾಝ್ (ರಮಝಾನ್ ಕೊನೆಯ ಶುಕ್ರವಾರದ ಪ್ರಾರ್ಥನೆ) ಗೆ ಧ್ವನಿವರ್ಧಕಗಳನ್ನು ಬಳಸಿರಲಿಲ್ಲ. ಕೆಲವೆಡೆ ಧ್ವನಿವರ್ಧಕ ಬಳಸಿದರೂ, ಧ್ವನಿಗಾತ್ರವನ್ನು ಮಿತಿಗೊಳಿಸಲಾಗಿತ್ತು. ಅಂತೆಯೇ ಪ್ರಾರ್ಥನೆ ಸಲ್ಲಿಸಲು ರಸ್ತೆ ಸಂಚಾರವನ್ನೂ ಈ ಬಾರಿ ನಿರ್ಬಂಧಿಸಿರಲಿಲ್ಲ.