ಕಾಯ್ ನಾಗೇಶ್.. ಕಾರ್ಮಿಕನಲ್ಲ

ಬೆಳಗಿನ ಜಾವ ಐದೂವರೆ ಸಮಯ. ಮಂಜು ಮುಸುಕಿತ್ತು, ಬೆಳಕಾಗಲು ತವಕಿಸುತ್ತಿತ್ತು. ಸೂರ್ಯನಿಗಿನ್ನು ಸಮಯವಿತ್ತು. ಆ ನೀರವ ಮೌನದಲ್ಲಿ ಬೀದಿಯಿಂದ ಸೈಕಲ್ ಪೆಡಲ್‌ನ ಜೀಕು ಸದ್ದು ಸಂಗೀತದಂತೆ ಕೇಳಿಬರುತ್ತಿತ್ತು. ಬೆಳಗಿನ ವ್ಯಾಯಾಮದ ಜನರ ಹೆಜ್ಜೆ ಸದ್ದಿಗಿಂತ ಭಿನ್ನವಾಗಿದ್ದ ಶಬ್ದ. ಬಗ್ಗಿ ಬೀದಿಯನ್ನೊಮ್ಮೆ ನೋಡಬೇಕೆನಿಸಿತು. ನೋಡಿದರೆ, ಎಣ್ಣೆ ಕಾಣದ ಚೈನು, ಪೆಡಲ್ ಮೇಲೆ ಶಕ್ತಿ ಬಿಟ್ಟು ಸೈಕಲ್ ತುಣಿಯುತ್ತಿದ್ದ, ಸುಮಾರು ಅರವತ್ತರಿಂದ ಎಪ್ಪತ್ತರ ತನಕ ವಯಸ್ಸಾಗಿರುವ ವ್ಯಕ್ತಿ ಕಾಣಿಸಿದರು.
ಆ ಸೈಕಲ್ ಬೆಳಗಿನ ವ್ಯಾಯಾಮಕ್ಕೆ ಬಳಸುವ ಆಧುನಿಕ ಸೈಕಲ್ ಅಲ್ಲ. ವ್ಯಾಯಾಮ ಮಾಡುವ ಮಂದಿ ಬಳಸುವ ಟ್ರಾಕ್ ಸೂಟು ಬ್ರಾಂಡೆಡ್ ಬಟ್ಟೆಯನ್ನೇನೂ ಅವರು ತೊಟ್ಟಿರಲಿಲ್ಲ. ಕಾಲಿನಲ್ಲಿ ಯಾವ ನೈಕ್, ಪ್ಯೂಮಾ, ಅಡಿಡಾಸ್ ಶೂಸ್ ಕೂಡ ಇರಲಿಲ್ಲ. ಬದಲಿಗೆ ಎಪ್ಪತ್ತರ ದಶಕದ ಅಟ್ಲಾಸ್ ಸೈಕಲ್. ಸ್ಕೆಲಿಟನ್‌ನಂತಿತ್ತು. ಅದನ್ನು ತುಳಿಯುತ್ತಿದ್ದ ವ್ಯಕ್ತಿಯೋ.. ಸೈಕಲ್ಲಿಗೇ ಸೆಡ್ಡು ಹೊಡೆಯುವಂತೆ, ಸ್ಕೆಲಿಟನ್‌ಗೆ ಅಂಗಿ ತೊಡಿಸಿದಂತೆ, ಸೊರಗಿ ಸುಸ್ತಾಗಿದ್ದರು. ಹಳೇ ಸೈಕಲ್, ಅದರ ಆ ಕಡೆ ಈ ಕಡೆ ಹ್ಯಾಂಡಲ್‌ಗೆ ಎರಡು ದೊಡ್ಡ ಪ್ಲಾಸ್ಟಿಕ್ ಚೀಲಗಳು, ಅದರೊಳಗೆ ಒಂದು ದಪ್ಪನೆ ಹಗ್ಗ ಸುತ್ತಿಟ್ಟಿದ್ದಾರೆ. ಇನ್ನೊಂದರಲ್ಲಿ ಮಚ್ಚು, ಕುಡುಗೋಲು, ಸುತ್ತಿಗೆ, ಬ್ಯಾಗು ಇತ್ಯಾದಿ. ಸೈಕಲ್ ಸೀಟಿನ ಮುಂದಿನ ರಾಡಿಗೆ ಗಡಾರಿ (ಕಾಯಿ ಸುಲಿಯುವ ಸಾಧನ)ಯನ್ನು ಸಣ್ಣ ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿದೆ. ಸೈಕಲ್ ತುಳಿಯುತ್ತ, ಸುಸ್ತಾದಾಗ ನಡೆಯುತ್ತ, ತಲೆ ಎತ್ತಿ ನೋಡುತ್ತ, ಏನನ್ನೋ ಹುಡುಕುತ್ತಿದ್ದಾರೆ. ಆಕಾಶದೆತ್ತರಕ್ಕೆ ಬೆಳೆದುನಿಂತ ಮರಗಳತ್ತ ಗಮನ ನೆಟ್ಟಿದ್ದಾರೆ. ನಮಸ್ಕಾರ ಎಂದೆ. ತಕ್ಷಣ ‘ನಿಮ್ಮವು ಯಾವ ಮರ ಇಲ್ವಲ್ರ’ ಎಂದರು. ಅವರು ತೆಂಗಿನಮರ ಹತ್ತುವ, ಕಾಯಿ, ಕುರುಂಬಳೆ, ಎಡೆಮಟ್ಟೆ, ಗರಿ ಕೀಳುವ, ಕಿತ್ತ ತೆಂಗಿನಕಾಯಿಗಳನ್ನು ಸುಲಿದು ಕೊಡುವ, ಆ ಕೆಲಸಕ್ಕಾಗಿ ಕೇವಲ 250 ರೂ.ಗಳನ್ನು ಕೂಲಿಯಾಗಿ ಪಡೆಯುವ ಕೆಲಸದವರು. ಹೆಸರು ನಾಗೇಶ್. ಅವರ ಕೆಲಸ ಬೆಳಗ್ಗೆ ಆರರಿಂದ ಹನ್ನೆರಡು ಗಂಟೆವರೆಗೆ, ನಾಯಂಡಹಳ್ಳಿಯಿಂದ ಕತ್ತರಗುಪ್ಪೆವರೆಗೆ ಅವರ ಭೂ ವ್ಯಾಪ್ತಿ. ಆ ಪ್ರದೇಶದಲ್ಲಿರುವ ಮನೆಗಳ ಮುಂದಿನ ತೆಂಗಿನಮರಗಳ ಯೋಗಕ್ಷೇಮ ನೋಡಿಕೊಳ್ಳುವ ಮರವೈದ್ಯರು.
ಕನಕಪುರ ತಾಲೂಕಿನ ಅರಳಾಳುಸಂದ್ರದವರು. ನಲವತ್ತು ವರ್ಷಗಳ ಹಿಂದೆ ಅಪ್ಪ-ಅಮ್ಮ, ಒಡಹುಟ್ಟಿದ ಇಬ್ಬರು ಅಣ್ಣಂದಿರು ಇಲ್ಲವಾದಾಗ, ಊರು ಬಿಟ್ಟು ಬೆಂಗಳೂರಿಗೆ ಬಂದವರು. ಊರಿನಲ್ಲಿದ್ದಾಗ ಈಚಲು ಮರ ಹತ್ತುವುದನ್ನು ಕಲಿತಿದ್ದರು. ಸೇಂದಿ ಬಿಚ್ಚುವ ಕೆಲಸ ಮಾಡುತ್ತಿದ್ದರು. ಸರಕಾರ ಸೇಂದಿ ನಿಷೇಧಿಸಿದಾಗ ಕೆಲಸವಿಲ್ಲದಂತಾಗಿ ನಗರಕ್ಕೆ ವಲಸೆ ಬಂದರು. ಅವರು ಬಂದ ಕಾಲಕ್ಕೆ ಬೆಂಗಳೂರು ನಗರದಲ್ಲಿ ಮನೆಗಳ ಮುಂದೆ ಒಂದೋ ಎರಡೋ ತೆಂಗಿನಮರಗಳು ಇದ್ದೇ ಇರುತ್ತಿದ್ದವು. ನಾಗೇಶ್ ಮರಗಳನ್ನು ನಂಬಿದರು, ಮರಗಳಿದ್ದ ಮನೆಗಳು ನಾಗೇಶ್‌ಗಾಗಿ ಕಾಯುತ್ತಿದ್ದವು. ನಲವತ್ತು ವರ್ಷಗಳು ಉರುಳಿಹೋಗಿದ್ದೇ ಗೊತ್ತಾಗಲಿಲ್ಲ.
‘ಊರಲ್ಲಿ ಮನೆ, ಜಮೀನೇನು ಇರಲಿಲ್ವಾ’ ಎಂದೆ. ‘ಏಯ್, ಏನಿತ್ತಲ್ಲಿ, ನಾಡಂಚಿನ ಮುರುಕ್ಲು ಮನೆಯಿತ್ತು, ಅದ್ನ ಅಣ್ಣನ ಮಗನಿಗೆ ಬುಟ್ಟು, ಅವುನಾದ್ರು ಕೈ ಕಾಲು ಚಾಚ್ಕಂಡ್ ಮನಿಕ್ಕಳ್ಳಿ ಅಂತೇಳಿ ಬೆಂಗಳೂರಿಗೆ ಬಂದೆ’ ಎಂದರು. ಅರಳಾಳುಸಂದ್ರ ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ಅರ್ಧ ಅಡಿಗೆ ಕೊಲೆ ಮಾಡುವ ಅಣ್ಣ-ತಮ್ಮಂದಿರಿರುವ ಕಾಲದಲ್ಲಿ, ಅಣ್ಣನ ಮಗನಿಗೆ ಮನೆ ಬಿಟ್ಟು ಬಂದ ನಾಗೇಶ್, ಉದಾರಿಯಂತೆ ಕಾಣತೊಡಗಿದರು.
‘ಎಲ್ರೂ ನಿಮ್ಮಷ್ಟು ಉದಾರಿಗಳಾದ್ರೆ..’ ಎಂಬ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿ, ‘ಮೊನ್ನೆ ದಿನ ಒಂದ್ ಮನಿಗೋಗಿದ್ದೆ, ಅದು ನಾನು ಮೂವತ್ತು ವರ್ಷಗಳಿಂದ ಹೋಗ್ತಿರ ಮನೆ. ನಾನು ಮೊದ್ಲು ಅಲ್ಲಿಗೆ ಕೆಲಸಕ್ಕೆ ಹೋದಾಗ, ಆ ಮನೆಯ ಎರಡು ಸಣ್ ಮಕ್ಕಳು ನನ್ ಸುತ್ತಲೇ ಆಟ ಆಡತಿರವು. ಈಗ ಅವುಕ್ಕೇ ಎರಡೆರಡು ಮಕ್ಕಳಾಗವೆ, ಅಮೆರಿಕಾದಲ್ಲವೆ. ಆ ಮನೇಲಿ ಗಂಡ ಹೆಂಡ್ತಿ ಬಿಟ್ಟರೆ ಮತ್ಯಾರೂ ಇಲ್ಲ. ಬೇಕಾದೊಷ್ಟಿದೆ. ಎರಡು ಮರ ಅವೆ ಮಕ್ಕಳಿದ್ದಂಗೆ, ಎಂಥ ಫಲ ಕೊಡ್ತವೆ ಅಂದ್ರೆ.. ಮಕ್ಕಳೂ ಕೊಡ್ತವೆ, ಮರಗಳೂ ಕೊಡ್ತವೆ. ಇದ್ದೋರ್ಗೆ ಎಲ್ಲಾ.. ಏನ್ಮಾಡ್ತಿರ? ಆದ್ರೆ ಆ ಪುಣ್ಯಾತ್ಮ ಅವತ್ಗೂ ಇನ್ನೂರೂಪಾಯೆ, ಇವತ್ಗೂ ಇನ್ನೂರೂಪಾಯೆ. ಸ್ವಾಮೆ ಅಂದ್ರೆ, ಆ ಯಡೆಮಟ್ಟೆ ತಗಂಡೋಗೋ ಅಂತರೆ. ತಗಂಡೋದ್ರೆ ನನ್ ಹೆಂಡ್ತಿ ಅದ್ರಲ್ಲೆ ಬಡಿತಳೆ. ಈಗ ಅವ್ಳೆ ಗ್ಯಾಸ್ ಒಲೆ ಇಟ್ಕಂಡವಳೆ. ಯಡೆಮಟ್ಟೆ ಮುಟ್ಟೋರೇ ಇಲ್ಲ’ ಎಂದು ತೆಂಗಿನ ಮರದೊಂದಿಗಿನ ತಮ್ಮ ಪಯಣವನ್ನು ಬಿಚ್ಚಿಟ್ಟರು. ‘ದಿನಕ್ಕೊಂದು ಎರಡಾದ್ರು ಸಿಕ್ತದಾ’ ಎಂದೆ. ‘ದಿನಕ್ಕೆ ಎರಡು ಮರಕ್ಕೆ ಮೋಸಿಲ್ಲ. ನಾನು ನನ್ನ ಹೆಂಡ್ತಿ, ಮಗನ ಊಟಕ್ಕೇನು ಕೊರತೆ ಇಲ್ಲ. ಆದ್ರೂ ಈಗೀಗ ಬೆಂಗಳೂರಲ್ಲಿ ಬಿಲ್ಡಿಂಗ್ಳು ಬೆಳಸಕೆ ಬೆಳದ ಮರಗಳ್ನೆ ಕಡದಾಕ್ತಿದಾರೆ. ಕಡಿಯೋದು, ಕೆಡವೋದು ಅಂದರೆ ಜನಕ್ಕೆ ಅದೇನೋ ಕುಸಿ. ಅಂಥೋರೆ ಜಾಸ್ತಿ ಆಗವರೆ. ಅವರಿಂದಾಗಿ ಅರ್ಧಕ್ಕರ್ಧ ಮರಗಳು ಇಲ್ವೇ ಇಲ್ಲ ಬುಡಿ. ಜೊತಿಗೆ ಜನ ಜಾಸ್ತಿಯಾದ್ರು.. ಎಲ್ರೂಗೆ ಬೆಂಗಳೂರೆ ಬೇಕಾಯ್ತು, ಏನ್ಮಾಡೋದು... ಅವ್ರ ನನ್ನಂಗೇ ಅಲ್ವುರಾ? ಅದರಲ್ಲೂ ಅದೇನೋ ಕೊರೋನ ಅಂತ ಬಂತಲ್ಲ.. ಕಾಯಿಲೆ ಗೀಯಲೆ ಏನೂ ಬರಲಿಲ್ಲ. ಆದರೆ ಕೆಲಸಕ್ಕೆ ಕರೆಯದ್ ಇರಲಿ, ಮನೆ ಹತ್ರಕ್ಕೂ ಯಾರೂ ಸೇರಿಸಲಿಲ್ಲ. ಎರಡು ವರ್ಷ ಮಣ್ಣು ತಿಂದುಬುಟ್ಟೊ. ಅವರು ಇವರು ಬಂದು ದಿನಸಿ ಕೊಟ್ಟಿದ್ದೇ.. ಬದುಕ್ತಿವೋ ಇಲ್ವೋ ಅನ್ಸಬುಟ್ಟಿತ್ತು. ಯಾವ್ದೋ ಮರದಲ್ಲಿ ಯಾವ್ದೋ ಹಕ್ಕಿ ಮರಿ ಮಾಡದಿಲ್ವಾ? ಬದಕದಿಲ್ವಾ? ಹಂಗೆ, ನನಗೂ ಯಾರೋ ಪುಣ್ಯಾತ್ಮರು ಬಂದು ಕೊಟ್ಟರು, ನಾವು ಬದಿಕಂಡೊ’ ಎಂದು ನಿಟ್ಟುಸಿರುಬಿಟ್ಟರು.
‘ವಯಸ್ಸಾಗಿದೆ.. ಮರ ಹತ್ತೋದು ಕಷ್ಟ ಆಗಲ್ವಾ?’ ಎಂದೆ. ‘ವಯಸ್ನಾಗೆ ದಿನಕ್ಕೆ ಮೂವತ್ ಮರ ಹತ್ತಿದ್ದೆ, ಈಗ ಮೂರೂ ಆಗದಿಲ್ಲ. ತೊಡೆ ನಡಗ್ತವೆ. ಕೆಲವ್ರ ಆಗ್ಲೇ, ಮರದಿಂದ ಬಿದ್‌ಗಿದ್ ಸತ್ತೋಗಿ ಎಲ್ಲಿ ನಮ್ ತಲೆಮೇಲೆ ಬತ್ತದೆ ಅಂತ, ಇನ್ನೊಂದ್‌ಸಲ ನೋಡನ ಹೋಗೋ ಅಂತ ಕೆಲಸ ಕೊಡದೆಯಿರದು ಉಂಟು. ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ.. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ, ಕಾಯಿ ಕೆಡಕ್ತಿದೀನಿ, ಹಂಗೇ ಮ್ಯಾಕ್ ನೋಡ್ದೆ, ಕುರುಂಬಳೆ ಒಣಗಿತ್ತು, ಕೀಳನ ಅಂತ ಕೈ ಹಾಕ್ದೆ ನೋಡಿ.. ಗುಂಯ್ ಅಂತ ಎದ್ದುಬುಡ್ತು ಜೇನು! ಜೇನು ಹುಟ್ಟಿರದು ಕಾಣಲಿಲ್ಲ, ಎಳದುಬುಟ್ಟೆ. ಕೈ ಬಿಟ್ರೆ.. ಮೂವತ್ತಡಿ ಕೆಳಿಕ್ಕೆ! ಅಲ್ಲೇ ಇದ್ರೆ.. ಅದೇನಾಯ್ತಿನೋ ಗೊತ್ತಿಲ್ಲ! ಶಿವಾ ಅಂತ ಕಣ್ಮುಚ್ಚಿಕೊಂಡು ಕತ್ತು ಬಗ್ಗಿಸಿಕೊಂಡು ನಾನೂ ಒಂದು ಯಡೆಮಟ್ಟೆಯಂಗಾದೆ. ಬಟ್ಟೆ ಬೇರೆ ಬಿಚ್ಚಿದ್ದೆ, ಬನೀನಲ್ಲಿದ್ದೆ. ಎದ್ದೋ ನೋಡಿ, ಕೈ ಮೈಗೆಲ್ಲ ಮೆತ್ತಕಂಬುಟ್ಟೊ. ನಾನು.. ಮುಗೀತು ಕತೆ ಅಂದ್ಕಂಡೆ. ಮುಖ ಮಾತ್ರ ಮೇಲೆತ್ತಲಿಲ್ಲ. ಹತ್ತು ನಿಮಿಷದಲ್ಲಿ ಹೊಂಟೋದೊ. ಅಷ್ಟರಲ್ಲಿ ಮೈ ಕೈ ಎಲ್ಲ ಕಚ್ಚಾಕಿದ್ದೋ, ಉರಿ ತಡಿಯಕ್ಕಾಯ್ತಿತ್ತಿಲ್ಲ, ಅದರಲ್ಲೇ ಕೆಳಕ್ಕಿಳಿದ್ರೆ, ಇದ್ಯಾಕೋ, ಏನಾಯ್ತೋ ಅಂತರೆ ಯಜಮಾನ್ರು! ನಾನು ಬದುಕುದ್ನೋ ಸತ್ನೋ ಅನ್ನದೂ ಗೊತ್ತಿಲ್ಲ ಅವ್ರಿಗೆ! ಹದಿನೈದು ದಿನ ಮಲಗದೋನು ಏಳ್ಳಿಲ್ಲ’ ಎಂದು ಮೌನವಾದರು.
‘ಆಸ್ಪತ್ರೆ ಖರ್ಚಿಗೆ ದುಡ್ಡಿಗಿಡ್ಡು ಕೊಟ್ರ?’ ಎಂದೆ. ‘ಅಯ್ಯೋ ನೀವು, ನೋಡ್ಕಂಡು ಕೀಳಬಾರದೇನೋ, ಹೆಜ್ಜೇನು ಮನೆವಳಿಕ್ಕೆ ಬಂದಿದ್ರೆ ಏನ್ ಗತಿ, ಹೆಂಗಸ್ರು ಮಕ್ಕಳೆಲ್ಲ ಎಲ್ಲಿಗೋಗಬೇಕಾಗಿತ್ತು ಅಂತ ನನಗೇ ಬಯ್ದ್ರು. ಕೊನೆಗೆ ಕನಿಕರ ತೋರ್ಸಿ, ನೂರು ರೂಪಾಯಿ ಜಾಸ್ತಿ ಕೊಟ್ರು. ಉಸಾರಾದ್ಮೇಲೆ ಬಂದು ಕಿತ್ಕೊಡು ಅಂದ್ರು..’
‘ಎಲ್ಲಾ ಇಂಥೋರೇನಾ?’ ಅಂದೆ. ‘ಇಲ್ಲಾ ಇಲ್ಲಾ.. ನಲವತ್ತು ವರ್ಷ ಈ ಬೆಂಗಳೂರಲ್ಲಿ ಬದುಕಿದೀನಿ.. ಒಂದಷ್ಟು ಜನ ಅವ್ರೆ, ಅವರ ಮರಗಳ್ನ ನಾನು ಮಗಿನಂಗೆ ನೋಡ್ಕತಿನಿ, ಅವರು ನನ್ನ ಮಗನಂಗೆ ಕಾಪಾಡ್ತಾವ್ರೆ. ಎಲ್ಲೋ ಕೆಲವ್ರ ಮನೆ ಕಟ್ಟಕೆ ಮರ ಕಡ್ದು ಬಿಸಾಕ್ತರಲ್ಲ, ಹಂಗೆ ಕಡ್ಡಿ ತುಂಡ್ ಮಾಡ್ದಂಗೆ ಇಷ್ಟೇ ಕೊಡದು ಅಂತರೆ, ಅಂಥೋರು ಇದಾರೆ, ಇಂಥೋರು ಇದಾರೆ. ನನಗನ್ನಸ ಪ್ರಕಾರ, ಒಳ್ಳೇರೆ ಜಾಸ್ತಿ ಇದಾರೆ. ಇಲ್ದಿದ್ರೆ ಇಷ್ಟೊರ್ಷ ಇಲ್ಲಿ ನಾನು ಬದಕಕ್ಕಾಯ್ತಿತ್ತೆ?’ ಎಂದರು.
ನಲವತ್ತು ವರ್ಷಗಳ ಕಾಲ ಅದೆಷ್ಟು ಮರಗಳನ್ನು ಹತ್ತಿ ಇಳಿದಿದ್ದಾರೋ ಲೆಕ್ಕವೇ ಇಲ್ಲ. ಆದರೂ ಇವರ ಬದುಕು ಒಂದಿಂಚೂ ಮೇಲೇರಿಲ್ಲ. ಒಂದೊಳ್ಳೆ ಬಟ್ಟೆ-ಚಪ್ಪಲಿ ಹಾಕಿಕೊಂಡಿದ್ದಿಲ್ಲ. ಸಾಮಾಜಿಕ ಸ್ಥಾನಮಾನ ಅಂದರೇನು ಅನ್ನೋದೆ ಗೊತ್ತಿಲ್ಲ. ಇಷ್ಟಾದರೂ ಮಾಡುವ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವ, ಕಾಯಕವೇ ಕೈಲಾಸವೆಂದು ಭಾವಿಸಿರುವ, ಮರಗಳನ್ನು ಮಕ್ಕಳಂತೆ ಕಾಣುವ, ಅದೇ ಬದುಕೆಂದು ಒಪ್ಪಿಕೊಂಡಿರುವ ನಾಗೇಶ್‌ರನ್ನು ಎಲ್ಲರೂ ‘ಕಾಯ್ ನಾಗೇಶ್’(ತಮಿಳು ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ತಾಯ್ ನಾಗೇಶ್ ಅಲ್ಲ) ಎಂತಲೇ ಕರೆಯುತ್ತಾರೆ. ಅದನ್ನವರು ಪದ್ಮಭೂಷಣ ಪ್ರಶಸ್ತಿಯಂತೆ ಸ್ವೀಕರಿಸಿ, ಬೊಚ್ಚುಬಾಯಿಯಲ್ಲಿ ನಗುತ್ತಾರೆ. ಇಂತಹವರು ಅದೆಷ್ಟು ಮಂದಿ ಇದ್ದಾರೋ ಲೆಕ್ಕವಿಲ್ಲ. ಇವರಿಗೆ ಕಾರ್ಮಿಕರನ್ನು ಗೌರವಿಸುವ ಕಾರ್ಮಿಕ ದಿನವೊಂದಿದೆ, ಅವರ ಹಕ್ಕುಗಳಿಗಾಗಿ ಹೋರಾಡುವ ಕಾರ್ಮಿಕ ಸಂಘಟನೆಗಳಿವೆ ಎಂಬುದೂ ಗೊತ್ತಿಲ್ಲ. ಅಷ್ಟೆಲ್ಲ ಏಕೆ, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿಯೇ ಕಾರ್ಮಿಕ ಇಲಾಖೆ ಇದೆ, ಸಾವಿರಾರು ಅಧಿಕಾರಿಗಳಿದ್ದಾರೆ, ಸಚಿವರಿದ್ದಾರೆ, ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನವಿದೆ ಎಂಬುದೂ ತಿಳಿದಿಲ್ಲ. ಈ ವ್ಯವಸ್ಥೆಯೂ ಬದಲಾಗಲಿಲ್ಲ, ನಮ್ಮ ಕಾಯ್ ನಾಗೇಶ್ ಕೂಡ ಬದಲಾಗಲಿಲ್ಲ.







