ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಯಾವುದಾದರೂ ಒಂದು ಪರೀಕ್ಷೆ ನಡೆಸಿ: ಗುಜರಾತ್ ಸಿಎಂಗೆ ಕೇಜ್ರಿವಾಲ್ ಸವಾಲು
ರಾಜ್ಯದಲ್ಲಿ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ

ಭರೂಚ್,( ಗುಜರಾತ್): "ಗುಜರಾತ್‌ನಲ್ಲಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಯಾವುದಾದರೂ ಒಂದು ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ" ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ರವಿವಾರ ಹೇಳಿದ್ದಾರೆ.
"ರಾಜ್ಯದಲ್ಲಿ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ. ನಮಗೆ ಒಂದು ಅವಕಾಶ ನೀಡಿ, ನಾನು ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನೀವು ನನ್ನನ್ನು ರಾಜ್ಯದಿಂದ ಹೊರ ಹಾಕಬಹುದು" ಎಂದರು.
ದಿಲ್ಲಿ ಹಾಗೂ ಇತ್ತೀಚೆಗೆ ಪಂಜಾಬ್‌ನಲ್ಲಿ ಭಾರೀ ಯಶಸ್ವಿಯಾದ ಆಡಳಿತ ಮಾದರಿಯನ್ನು ಗುಜರಾತ್ ನಲ್ಲೂ ನೀಡುವುದಾಗಿ ಕೇಜ್ರಿವಾಲ್ ರವಿವಾರ ಭರವಸೆ ನೀಡಿದ್ದಾರೆ.
ಬುಡಕಟ್ಟು ಜನಾಂಗದವರು ಹೆಚ್ಚಿರುವ ಗುಜರಾತ್‌ನ ಭರೂಚ್‌ನಲ್ಲಿರುವ ಶಾಲೆಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್, ಗುಜರಾತ್‌ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.
"ಗುಜರಾತ್‌ನಲ್ಲಿ 6,000 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ನಾವು ದಿಲ್ಲಿಯಲ್ಲಿ ಶಾಲೆಗಳನ್ನು ಬದಲಾಯಿಸಿದ ರೀತಿ ಈ ಭವಿಷ್ಯವನ್ನು ಬದಲಾಯಿಸಬಹುದು " ಎಂದು ದಿಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.