ಹಿಂದೂ-ಮುಸ್ಲಿಮರು ಒಗ್ಗಟ್ಟಾಗಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೈಜೋಡಿಸಬೇಕು: ಪ್ರಿಯಾಂಕ್ ಖರ್ಗೆ

ಕಲಬುರಗಿ: ದೇಶದ ಎಲ್ಲ ಧರ್ಮಗಳು ಒಗ್ಗಟ್ಟಾಗಿ ಇದ್ದು ದೇಶದ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ನಿರ್ಮಿಸುವ ಮೂಲಕ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ದೇಶದ್ರೋಹಿ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ, ಶಾಸಕ ಹಾಗು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಲಗುಂದಿ ಫೌಂಡೇಶನ್ ವತಿಯಿಂದ ಕಲಬುರಗಿ ನಗರದ ಶಾನ್ ಭಾಗ ಕಲ್ಯಾಣ ಮಂಟಪದಲ್ಲಿ ರಮಝಾನ್ ಪ್ರಯುಕ್ತ ಅಹಾರ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಹಿಜಾಬ್, ಹಲಾಲ್ ಕಟ್, ದೇವಸ್ಥಾನ, ಮಸೀದಿ ಹೀಗೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಹಿಂದೂ ಮುಸ್ಲಿಂರ ನಡುವೆ ವೈಮನಸ್ಸು ಮೂಡಿಸಲು ಪ್ರಯತ್ನ ನಡೆದಿದೆ. ಇತ್ತೀಚಿಗೆ ಮುಸ್ಲಿಂರಿಂದ ಮಾವಿನ ಹಣ್ಣು ಖರೀದಿ ಅವರೊಂದಿಗೆ ವ್ಯಾಪಾರ ವ್ಯವಹಾರ ಮಾಡಬೇಡಿ ಎಂದು ಹೇಳಲಾಗುತ್ತಿದೆ ಇದು ಸರಿಯಲ್ಲ. ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ ಎನ್ನುವವರು ಮುಸ್ಲಿಂ ದೇಶಗಳಿಂದ ಪೆಟ್ರೋಲ್ ಖರೀದಿ ಮಾಡುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.
ಸಂವಿಧಾನ ಇರುವವರೆಗೆ ನಾವೆಲ್ಲ ಇರುತ್ತೇವೆ. ನಾನು ಜನನಾಯಕನಲ್ಲ ಆ ಭಗವಂತ ನಿಮ್ಮೆಲ್ಲರ ಸೇವೆ ಮಾಡಲು ಕಳಿಸಿರುವ ಸಾಮಾನ್ಯ ಮನುಷ್ಯ ಆದರೆ ಧರ್ಮದ ಹೆಸರಲ್ಲಿ ದೇಶದ ಮುಸ್ಲಿಮರನ್ನ ಹಿಂದೂಗಳನ್ನು ವಿಭಾಗಿಸುವವರ ವಿರುದ್ಧ ಹೋರಾಟ ನಡೆಸುತ್ತೇನೆ. ನೊಂದವರ ಧ್ವನಿಯಾಗಿ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದರು.
ಕಲಬುರಗಿ ಜಿಲ್ಲೆ ಭ್ರಾತೃತ್ವಕ್ಕೆ ಹೆಸರಾಗಿದೆ. ಸೂಫಿ ಸಂತರ ನಾಡಿದು. ಇಲ್ಲಿ ಶರಣಬಸವೇಶ್ವರ ಇದ್ದಾರೆ, ಖಾಜಾ ಬಂದೇನವಾಝ್ ಇದ್ದಾರೆ ಬುದ್ಧನೂ ಇದ್ದಾರೆ. ಇಂತಹ ಜಾಗದಲ್ಲಿ ಸಮಾಜವನ್ನು ವಿಭಾಗಿಸುವ ಪ್ರಯತ್ನ ಫಲ ನೀಡುವುದಿಲ್ಲ ಎಂದು ಖರ್ಗೆ ಹೇಳಿದರು.
ಸಂತೋಷ ಬಿಲಗುಂದಿ ಇಂದು 2000 ಆಹಾರ ಕಿಟ್ ವಿತರಿಸುತ್ತಿದ್ದಾರೆ. ಇದು ಅವರು ಮುಸ್ಲಿಮರ ಪ್ರೀತಿಯ ಸೇವೆಯಾಗಿದೆ. ಮುಂದಿನ ವರ್ಷ 20,000 ಆಹಾರ ಕಿಟ್ ವಿತರಿಸುವ ಶಕ್ತಿ ಆ ಭಗವಂತ ನೀಡಲಿ ಎಂದರು.
ಮಹಮ್ಮದ್ ಫಕ್ರುದ್ದೀನ್ ಸಾಬ್ ಶೇಖ್ ರೋಜಾ ಮಾತನಾಡಿ ಹಿಂದೂಸ್ಥಾನದಲ್ಲಿ ಹಿಂದೂ ಮುಸ್ಲಿಮರು ಬೇರೆಯಲ್ಲ. ಈ ದೇಶ ಬಸವಣ್ಣ, ಅಂಬೇಡ್ಕರ ಅವರ ನಾಡು ಇದನ್ನು ಒಡೆಯುವ ಯಾವ ಪ್ರಯತ್ನವನ್ನು ಮುಸ್ಲಿಮರು ಬೆಂಬಲಿಸುವುದಿಲ್ಲ. ಶಾಂತಿ ಸಂದೇಶ ಸಾರುವ ಭ್ರಾತೃತ್ವದ ಮಹತ್ವವನ್ನು ತಿಳಿಸುವ ಪವಿತ್ರ ರಮಝಾನ್ ಸಂದರ್ಭ ಸಂತೋಷ ಬಿಲಗುಂದಿ ಅವರು ಆಹಾರ ಕಿಟ್ ವಿತರಿಸುತ್ತಿರುವುದು ಖುಷಿಯ ಸಂಗತಿ ಎಂದರು.
ಸಂತೋಷ ಬಿಲಗುಂದಿ ಮಾತನಾಡಿ, ಕೋವಿಡ್ ಮಹಾಮಾರಿ ಸಂದರ್ಭ ಎರಡು ವರ್ಷಗಳ ಕಾಲ ನಾವು ಸಂಕಟದಲ್ಲಿದ್ದೆವು ಆಗ ಯಾರು ಯಾರೊಂದಿಗೂ ಮುಕ್ತವಾಗಿ ಬೆರೆಯಲಾಗುತ್ತಿರಲಿಲ್ಲ. ಈ ಸಂದರ್ಭ ನಾನು ನಿಮ್ಮೆನ್ನೆಲ್ಲ ಭೇಟಿಯಾಗುತ್ತಿರುವುದು ಬಹಳ ಖುಷಿ ತಂದಿದೆ. ನಿಮ್ಮೆಲ್ಲರ ಸಹಕಾರದಿಂದ ಬಿಲಗುಂದಿ ಫೌಂಡೇಶನ್ ಮತ್ತಷ್ಟು ಸಾಮಾಜಿಕ ಕಾರ್ಯಾ ಮಾಡಲು ಉತ್ಸಕವಾಗಿದೆ ಎಂದರು.
ವೇದಿಕೆಯ ಮೇಲೆ ಸಂತೋಷ ಬಿಲಗುಂದಿ, ನಝರ್ ಹುಸೇನ್, ಫಾರೂಖ್ ಸೇಠ್, ಸಂತೋಷ ಪಾಟೀಲ, ಸಿದ್ದು ಪಾಟೀಲ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ, ಮುನ್ನಾ, ಸಚಿನ್ ಸಿರವಾಳ, ರಾಜೀವ್ ಜಾನೆ, ಈರಣ್ಣ ಝಳಕಿ ಸೇರಿದಂತೆ ಮತ್ತಿತರಿದ್ದರು.







