ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ

ಇನಾಯತ್ ಅಲಿ
ಮಂಗಳೂರು : ಕೆಪಿಸಿಸಿ ರಾಷ್ಟ್ರಿಯ ಅಧ್ಯಕ್ಷ ರಾಹುಲ್ ಗಾಂಧಿಯವರ ಸೂಚನೆಯ ಮೇರೆಗೆ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ನಾಯಕರಾದ ಸಿದ್ದರಾಮಯ್ಯ ಅವರ ಆಶಯದಂತೆ ನನಗೆ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಅವರಿಗೆ ಅಭಾರಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ರವಿವಾರ ಕಾರ್ಯನಿಮಿತ್ತ ಸುರತ್ಕಲ್ ಗೆ ಆಗಮಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕರ ಸೂಚನೆಯಂತೆ ರಾಜ್ಯಾದ್ಯಂತ 78 ಲಕ್ಷಕ್ಕೂ ಅಧಿಕ ಹೊಸ ಕಾರ್ಯಕರ್ತರ ನೋಂದಣಿ ಮಾಡಲಾಗಿದೆ. ಜಿಲ್ಲೆ, ರಾಜ್ಯಾದ್ಯಂತ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲೆ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಪಕ್ಷ ಸೇರ್ಪಡೆಗೆ ಪ್ರೋತ್ಸಾಹ ನೀಡಲಾಗುವುದು. ಈಗಾಗಲೇ ನೋಂದಣಿಯಾಗಿರುವ ಸದಸ್ಯರ ಜೊತೆಗೆ ಇನ್ನುಳಿದ ವರನ್ನೂ ಪಕ್ಷಕ್ಕೆ ಸೇರಿಲು ಪ್ರೇರೇಪಿಸಲಾಗುವುದು ಎಂದು ಇನಾಯತ್ ಅಲಿ ಹೇಳಿದರು.