ವಿಭಜಕ ಶಕ್ತಿಗಳ ಕುತಂತ್ರವನ್ನು ಸೋಲಿಸಲು ಮುಂದಾಗಿ: ಸಂತೋಷ್ ಬಜಾಲ್

ಮಂಗಳೂರು : ಅಮೇರಿಕಾದ ಚಿಕಾಗೋದಲ್ಲಿ ಬಂಡವಾಳಶಾಹಿ ಮಾಲಕರ ವಿರುದ್ದ ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ವರ್ಗ ನಡೆಸಿದ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ ಸಂಗಾತಿಗಳನ್ನು ನೆನಪಿಸುವ ದಿನವೇ ಮೇ ೧. ಇಂದು ನಮ್ಮನ್ನಾಳುವ ಸರಕಾರಗಳು ಮೇ ದಿನ ಆಶಯವನ್ನು ಬುಡಮೇಲು ಮಾಡಲು ಹೊರಟಿದೆ. ಹಾಗಾಗಿ ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡುವ ಬದಲು ಮಾಲಕ ವರ್ಗದ ಪರವಾಗಿ ಮಂಡಿಯೂರಿರುವ ವಿಭಜಕ ಶಕ್ತಿಗಳ ಕುತಂತ್ರವನ್ನು ಸೋಲಿಸಲು ಮುಂದಾಗಬೇಕಾಗಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಮೇ ದಿನಾಚರಣೆಯ ಅಂಗವಾಗಿ ಸಿಐಟಿಯು ಕಂಕನಾಡಿ, ಅಳಪೆ ಸಮಿತಿಯು ಬಜಾಲ್ ಪಕ್ಕಲಡ್ಕ ಬಸ್ ನಿಲ್ದಾಣದ ಬಳಿ ರವಿವಾರ ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕ ಮುಖಂಡ ಅಶೋಕ್ ಸಾಲ್ಯಾನ್ ಮಾತನಾಡಿ ಬಿಜೆಪಿ ಸರಕಾರ ಕಾರ್ಮಿಕರ ಹಕ್ಕುಗಳ ಕಾಯ್ದೆಗಳನ್ನು ರದ್ದು ಮಾಡುವ ಮೂಲಕ ದಮನಿಸಲು ಹೊರಟಿದೆ. ದೇಶದ ೪೪ ಕಾರ್ಮಿಕ ಕಾನೂನುಗಳನ್ನು ಈಗಾಗಲೇ ತಿದ್ದುಪಡಿ ಹೆಸರಿನಲ್ಲಿ ೪ ಸಂಹಿತೆಗಳನ್ನಾಗಿಸಿ ಮಾಲಕರ ಪರವಾಗಿ ಕಾನೂನು ರೂಪಿಸಿದೆ. ಅವುಗಳ ವಿರುದ್ಧ ಪ್ರಬಲ ಚಳುವಳಿ ರೂಪಿಸಲು ಕಾರ್ಮಿಕ ವರ್ಗ ಈ ದಿನ ಪ್ರತಿಜ್ಞೆಗೈಯಬೇಕಾಗಿದೆ ಎಂದರು.
ಹಿರಿಯ ಮುಖಂಡ ಹರಿಶ್ಚಂದ್ರ ನಾಯ್ಕ್ ಕೆಂಬಾವುಟವನ್ನು ಹಾರಿಸುವ ಮೂಲಕ ಮೇ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ಲೋಕೇಶ್ ಎಂ, ಸುರೇಶ್ ಬಜಾಲ್, ಸಿಪಿಎಂ ನಗರ ಸಮಿತಿ ಮುಖಂಡ ದೀಪಕ್ ಬಜಾಲ್, ಧೀರಜ್ ಬಜಾಲ್, ಗಿರೀಶ್ ಪಕ್ಕಲಡ್ಕ, ಆನಂದ ಎನೆಲ್ಮಾರ್, ಪ್ರಕಾಶ್ ಶೆಟ್ಟಿ, ಕೇಶವ ಭಂಡಾರಿ, ಅಶೋಕ್ ಎನೆಲ್ಮಾರ್, ಧೀರಜ್ ಪೂಜಾರಿ ಉಪಸ್ಥಿತರಿದ್ದರು.
ಸಿಪಿಎಂ ಅಳಪೆ ದಕ್ಷಿಣ ಶಾಖಾ ಕಾರ್ಯದರ್ಶಿ ವರಪ್ರಸಾದ್ ಸ್ವಾಗತಿಸಿದರು. ಜಗದೀಶ್ ಬಜಾಲ್ ವಂದಿಸಿದರು.