ಕಾಸರಗೋಡು: ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತ್ಯು, ಐವರು ಗಂಭೀರ

ಕಾಸರಗೋಡು: ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.
ಕರಿವೆಲ್ಲೂರು ಪೇರಲದ ದೇವಾನಂದ (16) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಐವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಚೆರ್ವತ್ತೂರಿನ ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ 14 ಮಂದಿ ಅಸ್ವಸ್ಥಗೊಂಡಿದ್ದು, ಜ್ವರ, ವಾಂತಿ ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಪ್ರಿಲ್ 29 ಮತ್ತು 30ರಂದು ಇವರು ಶವರ್ಮ ಸೇವಿಸಿದ್ದರು. ಶವರ್ಮ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದ ದೇವಾನಂದ ಇಂದು ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಶವರ್ಮ ಸೇವಿಸಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಕಾರಣವಾದ ಕೂಲ್ ಬಾರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ದಾಖಲಿಸಲಾದ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಶಾಸಕ ಇ. ಚಂದ್ರ ಶೇಖರನ್ ಮೊದಲಾದವರು ಭೇಟಿ ನೀಡಿದರು. ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.





