ಚಿಕ್ಕಮಗಳೂರು: ರಮಝಾನ್ ನಲ್ಲಿ ಉಪವಾಸ ಆಚರಿಸುವ ವಕೀಲ ಸೋಮಶೇಖರ್
''ಈ ಉಪವಾಸ ಸದಾ ಉಲ್ಲಾಸದಿಂದ ಇರಲು ಕಾರಣವಾಗಿದೆ''

ವಕೀಲ ಸೋಮಶೇಖರ್
ಚಿಕ್ಕಮಗಳೂರು, ಮೇ 1: ''ಪ್ರತಿಯೊಬ್ಬ ಮನುಷ್ಯನಿಗೂ ಉಪವಾಸ ಆಚರಣೆ ಆರೋಗ್ಯ ಸುಧಾರಣೆಯಲ್ಲಿ ಪರಿಣಾಮಕಾರಿ ಪಾತ್ರವಹಿಸುತ್ತದೆ. ವೇದ, ಪುರಾಣ, ಉಪನಿಷತ್ಗಳಲ್ಲೂ ಉಪವಾಸದ ಮಹತ್ವಗಳನ್ನು ಸಾರಲಾಗಿದೆ. ಆಧುನಿಕ ಆರೋಗ್ಯ ವಿಜ್ಞಾನವೂ ಉಪವಾಸ ವ್ರತಕ್ಕೆ ಮಹತ್ವವಿದೆ. ರಮಝಾನ್ ಸಂದರ್ಭ ಮಾಡುವ ಉಪವಾಸ ವ್ರತದಿಂದ ಆತ್ಮಶುದ್ಧಿ ಪ್ರಾಪ್ತಿಯಾಗುತ್ತದೆ. ರಮಝಾನ್ ಮಾಸಾಚರಣೆ ಅತ್ಯಂತ ಪವಿತ್ರ ಹಾಗೂ ಪ್ರಖ್ಯಾತಿ ಪಡೆದಿದೆ. ಸುಮಾರು 1 ತಿಂಗಳುಗಳ ಕಾಲ ಆತ್ಮಶುದ್ಧಿ ಪ್ರಾರ್ಥನೆ, ಉಪವಾಸ ಆಚರಣೆ ಮಾಡುವ ಮುಸಲ್ಮಾನ ಸಮುದಾಯಕ್ಕೆ ರಮಝಾನ್ ಪವಿತ್ರ ಹಬ್ಬ. ನಾನು ಕಳೆದ 10 ವರ್ಷಗಳಿಂದ ಉಪವಾಸ ಮಾಡುತ್ತಿದ್ದೇನೆ"... ಹೀಗೆಂದು ರಮಝಾನ್ ಉಪವಾಸದ ಮಹತ್ವದ ಬಗ್ಗೆ ಹೇಳಿದವರು ವಕೀಲ ಸೋಮಶೇಖರ್.
ವೃತ್ತಿಯಲ್ಲಿ ವಕೀಲರಾಗಿರುವ ಸೋಮಶೇಖರ್ ಕಳೆದ 10 ವರ್ಷಗಳಿಂದ ರಮಝಾನ್ ಮಾಸದ ಅವಧಿಯಲ್ಲಿ ಉಪವಾಸ ವ್ರತ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಸೋಮಶೇಖರ್ ಎಲ್ಲರ ಗಮನಸೆಳೆದಿದ್ದಾರೆ. ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಹಿರಿಯ ವಕೀಲರ ಸಾಲಿಗೆ ಸೇರುವ ಜೆ.ಕೆ.ಸೋಮಶೇಖರ್ ರಮಝಾನ್ ಮಾಸಾಚರಣೆಯ ಸಂದರ್ಭದಲ್ಲಿ ಮುಸಲ್ಮಾನರಂತೆ ಪ್ರತಿನಿತ್ಯ ಒಂದು ತಿಂಗಳು ಉಪವಾಸ ವೃತ ಆಚರಿಸುತ್ತಿದ್ದು, ಈ ಬಾರಿಯೂ ಅವರು ರಮಝಾನ್ ಮಾಸದಲ್ಲಿ ಉಪವಾಸ ಕೈಗೊಂಡಿದ್ದು, ಇದು ಅವರ 10ನೇ ವರ್ಷದ ಉಪವಾಸವಾಗಿದೆ.
ಸಾಮಾನ್ಯ ಕೃಷಿ ಕುಟುಂಬದ ಸೋಮಶೇಖರ್ ರಮಝಾನ್ ಸಂದರ್ಭದಲ್ಲಿ ಉಪವಾಸ ವ್ರತ ಆಚರಿಸುವ ಬಗ್ಗೆ ಸ್ವಯಂ ನಿರ್ಧಾರ ಕೈಗೊಂಡು ಅದರಂತೆ ಕಳೆದ 10 ವರ್ಷಗಳಿಂದ ರಮಝಾನ್ ಮಾಸದಲ್ಲಿ ತಪ್ಪದೇ ಉಪವಾಸ ಹಿಡಿಯುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ 4.45 ರಿಂದ ಸಂಜೆ 6.45ರವರೆಗೆ ಉಗುಳನ್ನೂ ನುಂಗದೇ ಸಂಪೂರ್ಣ ಉಪವಾಸ ಇರುತ್ತಾರೆ. ಸಂಜೆ ಮುಸಲ್ಮಾನ ಸಮುದಾಯದವರು ನಮಾಝ್ ಮುಗಿಸಿ ಆಹಾರ ಸೇವಿಸುವ ಸಂದರ್ಭದಲ್ಲಿಯೇ ಇವರೂ ಉಪವಾಸ ಕೈ ಬಿಟ್ಟು ಆಹಾರ ಸೇವಿಸುತ್ತಾರೆ. ಕಳೆದ 10 ವರ್ಷಗಳಿಂದ ಈ ಉಪವಾಸ ವ್ರತ ಕೈಗೊಂಡಿರುವ ಅವರು, ಉಪವಾಸದಿಂದ ತನ್ನ ದೇಹದ ತೂಕದಲ್ಲಿ ಇಳಿಕೆಯಾಗಿದ್ದು, ದೇಹದ ಆರೋಗ್ಯದಲ್ಲೂ ಭಾರೀ ಸುಧಾರಣೆ ಕಂಡಿದೆ.
ಎಲೆಮರೆ ಕಾಯಿಯಂತೆ ಕಳೆದ 10ವರ್ಷಗಳ ಕಾಲ ರಮಝಾನ್ ಸಂದರ್ಭದಲ್ಲಿ ಉಪವಾಸ ವ್ರತಾಚರಣೆ ನಡೆಸುವ ಮೂಲಕ ನಿರಂತರ ಕಾಯಕ ಮಾಡುತ್ತಿರುವ ಸೋಮಶೇಖರ್ ಅವರು ಧರ್ಮಧರ್ಮದ ಹೆಸರಿನಲ್ಲಿ ಗದ್ದಲ ಎದ್ದಿರುವ ಈ ಸಂದರ್ಭದಲ್ಲಿ ಸಾಮರಸ್ಯದ ಸಂದೇಶ ನೀಡುವ ಮಾದರಿ ವ್ಯಕ್ತಿಯಾಗಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂತಹ ಉಪವಾಸ ವ್ರತಾಚರಣೆಯಿಂದ ವಕೀಲಿ ವೃತ್ತಿಗಾಗಲೀ ದಿನ ನಿತ್ಯದ ತನ್ನ ಜೀವನಕ್ಕಾಗಲಿ ಯಾವುದೇ ಅಡಚಣೆಯಾಗುವುದಿಲ್ಲ. ಬದುಕಿನಲ್ಲಿ ದಿನನಿತ್ಯ ಉತ್ಸಾಹ ಹೆಚ್ಚಾಗಿ ಮನಃಶಾಂತಿ ದೊರೆಯುತ್ತಿದೆ. ಈ ಉಪವಾಸ ಸದಾ ಉಲ್ಲಾಸದಿಂದ ಇರಲು ಕಾರಣವಾಗಿದೆ.
- ಸೋಮಶೇಖರ್, ರಮಝಾನ್ ಮಾಸದಲ್ಲಿ ಉಪವಾಸ ಆಚರಿಸುವ ವಕೀಲ







