ದೇಶದ ಸಂಪತ್ತನ್ನು ಲೂಟಿ ಮಾಡುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಕಾರ್ಮಿಕ ವರ್ಗ ಒಂದಾಗಬೇಕು: ಸುಕುಮಾರ್

ಮಂಗಳೂರು : ದೇಶದ ಸಂಪತ್ತು ಕಾರ್ಮಿಕ ವರ್ಗ ಹಾಗೂ ಜನಸಾಮಾನ್ಯರಿಗೆ ಸೇರಿದ್ದೇ ಹೊರತು ಕೇವಲ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರ ಸೇರಿದ್ದಲ್ಲ. ಆದರೆ ದೇಶವನ್ನಾಳುವ ಸರಕಾರಗಳು ನಿರಂತರವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆಯುತ್ತಿದೆ. ಹಾಗಾಗಿ ಕಾರ್ಮಿಕ ವರ್ಗ ಸಂಘಟಿತರಾಗಿ ಕಾರ್ಪೊರೇಟ್ ಕಂಪೆನಿಗಳ ಮತ್ತು ಸರಕಾರಗಳ ಲೂಟಿಕೋರತನವನ್ನು ಬಯಲಿಗೆಳೆಯಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಸುಕುಮಾರ್ ಕರೆ ಹೇಳಿದರು.
ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಎಡಸಂಘಟನೆಗಳ ನೇತೃತ್ವದಲ್ಲಿ ರವಿವಾರ ನಗರದ ಕ್ಲಾಕ್ ಟವರ್ ಬಳಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರಕಾರ ಕಸಿಯುತ್ತಿದೆ. ದೇಶದಲ್ಲಿ ಕಾರ್ಮಿಕರನ್ನು ಮತ್ತೆ ೧೨-೧೪ ಗಂಟೆಗಳ ಕಾಲ ದುಡಿಸುವಂತಹ ಹುನ್ನಾರ ನಡೆಸುತ್ತಿದೆ. ಈ ಮೂಲಕ ೮ ಗಂಟೆಯ ದುಡಿಮೆಗಾಗಿ ಪ್ರಾರಂಭಗೊಂಡ ಚಿಕಾಗೋ ನಗರದ ಸಮರಧೀರ ಹೋರಾಟವನ್ನು ದೇಶದಲ್ಲಿ ಮತ್ತೆ ಆರಂಭಿಸಲು ಕಾರ್ಮಿಕ ವರ್ಗ ಸನ್ನದ್ದರಾಗಬೇಕು ಎಂದು ಸುಕುಮಾರ್ ಕರೆ ನೀಡಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಭೆಯನ್ನುದ್ದೇಶಿಸಿ ಬ್ಯಾಂಕ್ ಅಧಿಕಾರಿಗಳ ಅಖಿಲ ಭಾರತ ಮುಖಂಡರಾದ ರಾಘವ ಕೆ, ಸುರೇಶ್ ಹೆಗ್ಡೆ, ಬೀಡಿ ಕಾರ್ಮಿಕರ ನಾಯಕಿ ಜಯಂತಿ ಶೆಟ್ಟಿ, ವಿಮಾ ನೌಕರರ ಸಂಘದ ನಾಯಕ ಅಲ್ಬನ್ ಮಸ್ಕರೇನಸ್, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಪುರುಷೋತ್ತಮ ಪೂಜಾರಿ, ವಕೀಲರ ಸಂಘದ ನಾಯಕ ಯಶವಂತ ಮರೋಳಿ ಮಾತನಾಡಿದರು.
ಮೇ ದಿನ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಡಾ.ಕೃಷ್ಣಪ್ಪಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೀಡಿ ಕಾರ್ಮಿಕರ ನಾಯಕಿ ಭಾರತಿ ಬೋಳಾರ, ಕಟ್ಟಡ ಕಾರ್ಮಿಕರ ನಾಯಕ ರವಿಚಂದ್ರ ಕೊಂಚಾಡಿ, ಬಂದರು ಶ್ರಮಿಕ ಸಂಘದ ವಿಲ್ಲಿ ವಿಲ್ಸನ್, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕ ಬಿ.ಕೆ.ಇಮ್ತಿಯಾಝ್, ಡಿಎಚ್‌ಎಸ್ ನಾಯಕ ರಾಧಾಕೃಷ್ಣ, ಡಿವೈಎಫ್‌ಐ ಜಿಲ್ಲಾ ನಾಯಕ ಸಂತೋಷ್ ಬಜಾಲ್, ಎಸ್‌ಎಫ್‌ಐ ನಾಯಕ ವಿನಿತ್ ದೇವಾಡಿಗ ಪಾಲ್ಗೊಂಡಿದ್ದರು.
ರವಿಚಂದ್ರ ಕೊಂಚಾಡಿ ಸ್ವಾಗತಿಸಿದರು. ಯುವನಾಯಕ ನವೀನ್ ಕೊಂಚಾಡಿ ವಂದಿಸಿದರು. ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೆರವಣಿಗೆ
ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆಗಾಗಿ, ಪರ್ಯಾಯ ಜನಪರ ನೀತಿಗಳಿಗಾಗಿ ಎಂಬ ಘೋಷಣೆಯೊಂದಿಗೆ ಕಾರ್ಮಿಕ ದಿನಾಚರಣೆಯ ಅಂಗವಾಗಿ ಱಮೇ ದಿನಾಚರಣಾ ಸಮಿತಿೞಯ ವತಿಯಿಂದ ರವಿವಾರ ನಗರದ ಆರ್‌ಟಿಒ- ಸ್ಟೇಟ್‌ಬ್ಯಾಂಕ್-ರಾವ್ ಆ್ಯಂಡ್ ರಾವ್ ಸರ್ಕಲ್ ಮೂಲಕ ಕ್ಲಾಕ್ ಟವರ್‌ವರೆಗೆ ಕಾರ್ಮಿಕರ ಆಕರ್ಷಕ ಮೆರವಣಿಗೆ ನಡೆಯಿತು. ಕೆಂಪಂಗಿ ಧರಿಸಿದ ಕಾರ್ಮಿಕರು ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆದರು. ಬ್ಯಾಂಡ್‌ಗಳ ಅಬ್ಬರವು ಮೆರವಣಿಗೆಗೆ ಮೆರಗು ನೀಡಿತು. ಬಳಿಕ ಕ್ಲಾಕ್ ಟವರ್ ಬಳಿ ಬಹಿರಂಗ ಸಭೆ ನಡೆಯಿತು.













