ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ: ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ
ಮೈಸೂರು,ಮೇ.1: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ, ಗೃಹ ಮಂತ್ರಿ ಅಸಮರ್ಥರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅತ್ಯಂತ ದುರ್ಬಲ ಮತ್ತು ಭ್ರಷ್ಟ ಸರ್ಕಾರವಿದ್ದು, ಇಂತಹ ಕೆಟ್ಟ ಸರ್ಕಾರವನ್ನು ನೋಡಿಯೇ ಇರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಟಿ.ಕೆ.ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಸೇರಿದಂತೆ ಇವರ ಸಚಿವ ಸಂಪುಟದ ಸಚಿವರುಗಳಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ, ಗೃಹ ಸಚಿವರಂತೂ ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಅತ್ಯಂತ ದುರ್ಬಲ ಮತ್ತು ಭ್ರಷ್ಟ ಸರ್ಕಾರವನ್ನು ನಾವು ನೋಡಿಯೇ ಇರಲಿಲ್ಲ ಎಂದು ಹರಿಹಾಯ್ದರು.
ಪ್ರತಿಯೊಂದಕ್ಕೂ ಲಂಚ ಕೇಳುವ ಮಟ್ಟಕ್ಕೆ ಇವರ ಆಡಳಿತ ನಡೆಯುತ್ತಿದೆ. ಪಿಎಸ್ಐ, ಲೆಕ್ಚರರ್, ಇಂಜಿನಿಯರ್ ಸೇರಿದಂತೆ ಪ್ರತಿಯೊಂದು ವಿಚಾರಕ್ಕೂ ಹಣ ಪಡೆಯುತ್ತಿದ್ದಾರೆ. ಲಂಚ ಕೊಟ್ಟು ಬಂದವರ ಬಳಿ ಯಾವ ರೀತಿ ಕೆಲಸ ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ, ಆದರೆ ಅದನ್ನು ನಿರ್ವಹಣೆ ಮಾಡಲು ಈ ಸರ್ಕಾರಕ್ಕೆ ಬರುತ್ತಿಲ್ಲ, ಇಂಧನ ಸಚಿವರಿಗೆ ಆಡಳಿತವೇ ಗೊತ್ತಿಲ್ಲ ಇನ್ನು ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸುತ್ತಾರೆ ಎಂದರು.
ನಾನು ಸಾಫ್ಟ್ ಆಡಳಿತ ನಡೆಸುವುದನ್ನೇ ತಡೆದುಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ, ಇನ್ನೂ ಹಾರ್ಡ್ ಆಗಿ ಆಡಳಿತ ನಡೆಸಿದರೆ ತಡೆದುಕೊಳ್ಳುತ್ತಾರೆಯೇ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತವನ್ನೇ ನಡೆಸುತ್ತಿಲ್ಲ, ಅಂತಹದರಲ್ಲಿ ಅವರು ಯಾವ ಸಾಫ್ಟ್ ಹಾರ್ಡ್ ಆಡಳಿತ ನಡೆಸುತ್ತಾರೆ. ಕಾನೂನು ಸುವ್ಯವಸ್ಥೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಇದೂ ವರೆಗೂ ರಾಜ್ಯದ ಜನರಿಗೆ ಒಂದೇ ಒಂದು ಮನೆ ಕೊಡಲು ಆಗಿಲ್ಲ, ನನ್ನ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನೀಡಿದ್ದೆ ಎಂದು ಹೇಳಿದರು.







