ಐಪಿಎಲ್ :ಸನ್ರೈಸರ್ಸ್ ವಿರುದ್ಧ ಚೆನ್ನೈ ಜಯಭೇರಿ
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ ಭರ್ಜರಿ ಜೊತೆಯಾಟ, ಮಿಂಚಿದ ಮುಕೇಶ್ ಚೌಧರಿ

ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ ಭರ್ಜರಿ ಜೊತೆಯಾಟ, Photo: twitter
ಪುಣೆ, ಮೇ 1: ಆರಂಭಿಕ ಬ್ಯಾಟರ್ಗಳಾದ ಋತುರಾಜ್ ಗಾಯಕ್ವಾಡ್(99 ರನ್) ಹಾಗೂ ಡೆವೊನ್ ಕಾನ್ವೇ (ಔಟಾಗದೆ 85) ಬಾರಿಸಿದ ಭರ್ಜರಿ ಅರ್ಧಶತಕ ಹಾಗೂ ಮುಕೇಶ್ ಚೌಧರಿ(4-66) ನೇತೃತ್ವದ ಬೌಲರ್ಗಳ ಸಾಂಘಿಕ ಪ್ರಯತ್ನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ನ 46ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 13 ರನ್ ಅಂತರದಿಂದ ಮಣಿಸಿತು. ಈ ಮೂಲಕ ಚೆನ್ನೈ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು. ಈ ವರ್ಷ ಧೋನಿ ನಾಯಕತ್ವದ ಮೊದಲ ಪಂದ್ಯದಲ್ಲಿಯೇ ಗೆಲುವಿನ ಮುಖ ಕಂಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 203 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಹೈದರಾಬಾದ್ ಪರ ನಿಕೊಲಸ್ ಪೂರನ್(ಔಟಾಗದೆ 64 ರನ್,33 ಎಸೆತ, 3 ಬೌಂಡರಿ, 6 ಸಿಕ್ಸರ್)ಕೊನೆಯ ತನಕ ಹೋರಾಡಿ ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಕೇನ್ ವಿಲಿಯಮ್ಸನ್(47 ರನ್, 37 ಎಸೆತ, 2 ಬೌಂಡರಿ, 2 ಸಿಕ್ಸರ್ ) ಅಭಿಷೇಕ್ ಶರ್ಮಾ (39 ರನ್) ಹಾಗೂ ಶಶಾಂಕ್ ಸಿಂಗ್(15)ಎರಡಂಕೆಯ ಸ್ಕೋರ್ ಗಳಿಸಿದರು. ವಿಲಿಯಮ್ಸನ್ ಹಾಗೂ ಅಭಿಷೇಕ್ ಮೊದಲ ವಿಕೆಟ್ಗೆ 58 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಹೈದರಾಬಾದ್ ಇನಿಂಗ್ಸ್ನ ಹಳಿ ತಪ್ಪಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ಗೆ 202 ರನ್ ಗಳಿಸಿತು. ಗಾಯಕ್ವಾಡ್ ಹಾಗೂ ಕಾನ್ವೇ ಚೆನ್ನೈಗೆ ಭರ್ಜರಿ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್ಗೆ 17.5 ಓವರ್ಗಳಲ್ಲಿ 182 ರನ್ ಜೊತೆಯಾಟ ನಡೆಸಿದರು. ಈ ವರ್ಷದ ಟೂರ್ನಿಯಲ್ಲಿ ಮೊದಲ ವಿಕೆಟ್ಗೆ ಗರಿಷ್ಠ ಜೊತೆಯಾಟ ನಡೆಸಿದ ಆರಂಭಿಕ ಜೋಡಿ ಎನಿಸಿಕೊಂಡರು.
18ನೇ ಓವರ್ನಲ್ಲಿ ನಟರಾಜನ್ಗೆ ವಿಕೆಟ್ ಒಪ್ಪಿಸಿದ ಗಾಯಕ್ವಾಡ್(99 ರನ್, 57 ಎಸೆತ, 6 ಬೌಂಡರಿ, 6 ಸಿಕ್ಸರ್)ಕೇವಲ ಒಂದು ರನ್ನಿಂದ ಅರ್ಹ ಶತಕದಿಂದ ವಂಚಿತರಾದರು. ಇನ್ನೋರ್ವ ಆರಂಭಿಕ ಬ್ಯಾಟರ್ ಕಾನ್ವೇ(85 ರನ್,55 ಎಸೆತ, 8 ಬೌಂಡರಿ, 4 ಸಿಕ್ಸರ್)ಔಟಾಗದೆ ಉಳಿದರು. 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ನಾಯಕ ಎಂ.ಎಸ್. ಧೋನಿ (8 ರನ್)ಬೇಗನೆ ಔಟಾದರು.
ಸನ್ರೈಸರ್ಸ್ ಪರ ಟಿ.ನಟರಾಜನ್ (2-42)ಎರಡು ವಿಕೆಟ್ಗಳನ್ನು ಪಡೆದರೂ 42 ರನ್ ಬಿಟ್ಟುಕೊಟ್ಟರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ ಇಂದು 4 ಓವರ್ಗಳಲ್ಲಿ 48 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.







