ಉಕ್ರೇನ್ ಗೆ ಅನಿರೀಕ್ಷಿತ ಭೇಟಿ ನೀಡಿದ ಹಾಲಿವುಡ್ ನಟಿ ಏಂಜಲೀನಾ ಜೋಲಿ
ಕೀವ್, ಮೇ 1: ಹಾಲಿವುಡ್ ನಟಿ ಏಂಜಲೀನಾ ಜೋಲಿ ಶನಿವಾರ ಉಕ್ರೇನ್ ನಗರ ಲಿವಿವ್ಗೆ ಭೇಟಿ ನೀಡಿ ಯುದ್ಧದಿಂದ ಸಂತ್ರಸ್ತರಾದ ಮಕ್ಕಳು ಹಾಗೂ ಸ್ವಯಂಸೇವಾ ಕಾರ್ಯಕರ್ತರನ್ನು ಭೇಟಿಯಾದರು ಎಂದು ವರದಿಯಾಗಿದೆ.
ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿಯ ವಿಶೇಷ ಪ್ರತಿನಿಧಿಯಾಗಿರುವ ಜೋಲಿ ಲಿವಿವ್ನ ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಹಲವಾರು ನಾಗರಿಕರನ್ನು ಭೇಟಿಯಾದರು. ಅಲ್ಲದೆ ನಿರಾಶ್ರಿತರಿಗೆ ನೆರವು ಒದಗಿಸಲು ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಕಾರ್ಯಕರ್ತರೊಡನೆ ಮಾತುಕತೆ ನಡೆಸಿದರು. ರೈಲು ನಿಲ್ದಾಣದಲ್ಲಿ ಕಳೆದ ಸುಮಾರು 2 ತಿಂಗಳಿಂದ ನೆಲೆಸಿರುವ ನಿರಾಶ್ರಿತರಲ್ಲಿ ಹೆಚ್ಚಿನವರು 2 ರಿಂದ 10 ವರ್ಷದೊಳಗಿನ ಮಕ್ಕಳು.
ಸ್ವಯಂಸೇವಕ ತಂಡದಲ್ಲಿರುವ ಮನೋವೈದ್ಯರು ಪ್ರತೀ ದಿನ ಕನಿಷ್ಟ 15 ಮಂದಿಯೊಂದಿಗೆ ಆಪ್ತಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಕಾರ್ಯಕರ್ತರು ಮಾಹಿತಿ ನೀಡಿದರು. ಇವರಿಗೆ, ಅದರಲ್ಲೂ ವಿಶೇಷವಾಗಿ ಇಲ್ಲಿರುವ ಮಕ್ಕಳಿಗೆ ಆಗಿರುವ ಆಘಾತದ ಅರಿವು ನನಗಿದೆ. ಅವರ ನೋವಿಗೆ ಧ್ವನಿಯಾಗುವ, ಅವರಿಗೆ ಆಗಿರುವ ಗಾಯಕ್ಕೆ ಆರೈಕೆ ಮಾಡುವ ನೆರವು ಈ ಮಕ್ಕಳಿಗೆ ಅಗತ್ಯವಿದೆ ಎಂದು ಏಂಜಲಿನಾ ಜೋಲಿ ಹೇಳಿದ್ದಾರೆ. ಸ್ವಯಂಸೇವಕರು ಮತ್ತು ಮಕ್ಕಳೊಂದಿಗೆ ಫೋಟೊ ತೆಗೆಸಿಕೊಂಡ ಹಾಲಿವುಡ್ ನಟಿ ಅಲ್ಲಿದ್ದವರಲ್ಲಿ ಧೈರ್ಯ ತುಂಬಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.







