ಪಾಕ್ ಪ್ರಧಾನಿಯ ಕಾರ್ಯಕ್ರಮದ ಅಸಮರ್ಪಕ ನಿರ್ವಹಣೆ: ಟಿವಿ ಚಾನೆಲ್ ನ 17 ಸಿಬ್ಬಂದಿ ವಜಾ

ಇಸ್ಲಮಾಬಾದ್, ಮೇ 1: ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಲಾಹೋರ್ಗೆ ಭೇಟಿ ನೀಡಿರುವ ಕಾರ್ಯಕ್ರಮದ ವರದಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ವಿಫಲವಾದ ಕಾರಣಕ್ಕೆ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪಿಟಿವಿಯ 17 ಸಿಬಂದಿಯನ್ನು ವಜಾಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನೂತನವಾಗಿ ಆಯ್ಕೆಗೊಂಡ ಪ್ರಧಾನಿ ಶರೀಫ್ ಕಳೆದ ವಾರ ಲಾಹೋರ್ನ ಕೋಟ್ ಲಖ್ಪತ್ ಜೈಲು ಮತ್ತು ರಮಝಾನ್ ಬಝಾರ್ಗೆ ಭೇಟಿ ನೀಡಿದ್ದರು. ಆದರೆ ಕಾರ್ಯಕ್ರಮದ ವೀಡಿಯೊ ಫೂಟೇಜ್ ಅನ್ನು ಎಫ್ಟಿಪಿ(ಫೈಲ್ ಟ್ರಾನ್ಸ್ಫರ್ ಪ್ರೊಟೊಕಾಲ್) ವ್ಯವಸ್ಥೆಯ ಮೂಲಕ ರವಾನಿಸುವ ಸೌಲಭ್ಯವಿರುವ ಅತ್ಯಾಧುನಿಕ ಲ್ಯಾಪ್ಟಾಪ್ ಅಲಭ್ಯವಾದ ಕಾರಣ ಪಿಟಿವಿ ಸಿಬಂದಿ ಈ ಕಾರ್ಯಕ್ರಮದ ಸಮರ್ಪಕ ವರದಿ ಮತ್ತು ಪ್ರಸಾರಕ್ಕೆ ವಿಫಲವಾದರು ಎಂದು ‘ದಿ ಡಾನ್’ ದಿನಪತ್ರಿಕೆ ವರದಿ ಮಾಡಿದೆ.
ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನದ ಪ್ರಕಾರ, ವರದಿಗಾರರು ಹಾಗೂ ನಿರ್ಮಾಪಕರನ್ನು ಒಳಗೊಂಡಿರುವ ವಿವಿಐಪಿ ತಂಡವು ಪ್ರಧಾನಿ ಕಾರ್ಯಕ್ರಮದ ವರದಿಯ ಹೊಣೆ ವಹಿಸುತ್ತದೆ. ಈ ತಂಡ ಅತ್ಯಾಧುನಿಕ ಸೌಲಭ್ಯವಿರುವ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನವನ್ನು ಒಳಗೊಂಡಿರಬೇಕು. ಇಸ್ಲಮಾಬಾದ್ನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಈ ತಂಡ ದೇಶದೊಳಗೆ ಮತ್ತು ವಿದೇಶದಲ್ಲಿ ಪ್ರಧಾನಿಯ ಕಾರ್ಯಕ್ರಮದ ವರದಿ ಮಾಡುತ್ತದೆ.
ಆದರೆ ಆಧುನಿಕ ಸೌಲಭ್ಯದ ಲ್ಯಾಪ್ಟಾಪ್ನ ಕೊರತೆಯ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿಯ ಲಾಹೋರ್ ಭೇಟಿಯ ಮಾಹಿತಿ ದೊರೆತ ತಕ್ಷಣ ಲ್ಯಾಪ್ಟಾಪ್ ಸಮಸ್ಯೆಯನ್ನು ಪಿಟಿವಿ ಕೇಂದ್ರಕಚೇರಿಗೆ ತಿಳಿಸಿದ್ದೇವೆ ಎಂದು ಪಿಟಿವಿ ಲಾಹೋರ್ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.







