ಇಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಎಲ್ಲ ಘಟನೆಗಳ ತನಿಖೆ ನಡೆಸಲಾಗುವುದು: ಸಾರಿಗೆ ಕಾರ್ಯದರ್ಶಿ

Photo Courtesy: Twitter/@in_patrao)
ಹೊಸದಿಲ್ಲಿ, ಮೇ 1: ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿರುವ ನಡುವೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಕಾರ್ಯದರ್ಶಿ ಗಿರಿಧರ ಅರಮನೆ, ಇಂತಹ ಪ್ರತಿಯೊಂದು ಘಟನೆ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಅಲ್ಲದೆ, ಭಾರತೀಯ ಇಲೆಕ್ಟ್ರಿಕ್ ವಾಹನಗಳ ಉದ್ಯಮ ನಮ್ಮ ಕಲ್ಪನೆ ಮೀರಿ ಏಳಿಗೆಯಾಗಲು ಹಾಗೂ ಬೆಳೆಯಲು ಬದ್ದವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರದ ರಾಷ್ಟ್ರೀಯ ನಗದೀಕರಣದ ಸರಣಿಯ ಭಾಗವಾಗಿ 2022ರಲ್ಲಿ ಒಟ್ಟಾರೆ 21 ಸಾವಿರ ಕೋಟಿ ರೂಪಾಯಿ ಆಸ್ತಿ ನಗದೀಕರಣದ ಮೌಲ್ಯವನ್ನು ರಸ್ತೆ, ಸಾರಿಗೆ ಹಾಗೂ ಹೆದ್ದಾರಿ (ಎಂಒಆರ್ಟಿಎಚ್) ಸಚಿವಾಲಯ ಸಾಧಿಸಿದೆ ಎಂದು ಅವರು ತಿಳಿಸಿದರು.
‘‘ಇಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರತಿಯೊಂದು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು’’ ಎಂದು ಅವರು ಹೇಳಿದರು. ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಾಗುವ ಭಾರತದ ಪ್ರಯತ್ನವನ್ನು ವಿಫಲಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರಮನೆ, ಇಲೆಕ್ಟ್ರಿಕ್ ವಾಹನಗಳ ಉತ್ಪಾದಕರು ಅಗತ್ಯವಿರುವ ಕಾರ್ಯಾನಿರ್ವಹಣಾ ಸುರಕ್ಷಾ ಶಿಷ್ಟಾಚಾರ, ಗುಣಮಟ್ಟ ನಿಯಂತ್ರಣ ಹಾಗೂ ಗುಣಮಟ್ಟ ಖಾತರಿ ವ್ಯವಸ್ಥೆಯನ್ನು ತುರ್ತಾಗಿ ಆರಂಭಿಸಿದರೆ ಹಾಗಾಗಲಾರದು ಎಂದಿದ್ದಾರೆ.
ಇಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳ ಕುರಿತು ತನಿಖೆ ನಡೆಸಲು ತಜ್ಞರ ಸಮಿತಿಯೊಂದನ್ನು ರೂಪಿಸಲಾಗಿದೆ. ಅದು ಇದುವರೆಗೆ ವರದಿ ಸಲ್ಲಿಸಿಲ್ಲ ಎಂದು ಅರಮನೆ ತಿಳಿಸಿದರು.
ಎಲ್ಲ ಸಮಸ್ಯೆ ಹಾಗೂ ಬ್ಯಾಟರಿಗಳ ಖರೀದಿ, ವಿನ್ಯಾಸ, ನಿರ್ವಹಣೆ, ಕಾರ್ಯಾಚರಣೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಪರಿಶೀಲನೆ ನಡೆಸಲಾಗುವುದು. ಸೂಕ್ತ ಶಿಫಾರಸನ್ನು ಮಾಡಲಾಗುವುದು ಎಂದು ಅರಮನೆ ಹೇಳಿದ್ದಾರೆ.







